ಸಿಸಿಟಿವಿ ಆಫ್ ಮಾಡಿ ಉತ್ತರ ಪತ್ರಿಕೆ ತಿದ್ದಿದ್ದ ಅಮೃತ್ ಪೌಲ್; ತನಿಖೆಯಿಂದ ಬಯಲು: ಸಚಿವ ಆರಗ ಜ್ಞಾನೇಂದ್ರ

Update: 2022-07-04 18:37 GMT

ಬೆಂಗಳೂರು, ಜು. 4: ಪಿಎಸ್ಸೈ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಹಿರಿಯ ಪೋಲಿಸ್ ಅಧಿಕಾರ ಅಮೃತ್ ಪೌಲ್ ಬಂಧಿಸಲಾಗಿದ್ದು, ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅವರೇ ಕಟ್ಟಡದ ಸಿಸಿ ಟಿವಿ ಆಫ್ ಮಾಡಿ ಉತ್ತರ ಪತ್ರಿಕೆ ತಿದ್ದಿದ್ದ ಅಂಶ ತನಿಖೆಯಿಂದ ಬಯಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸೋಮವಾರ ತನ್ಮ ನಿವಾಸದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅವರೇ ಇದಕ್ಕೆಲ್ಲಾ ಜವಾಬ್ದಾರಿ. ಹೀಗಾಗಿ ಡಿವೈಎಸ್ಪಿ, ದಪೇದಾರ ಹಾಗೂ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ಅವರ ಕೊಟ್ಟ ಮಾಹಿತಿ ಮೇಲೆ ಇವರನ್ನ ವಿಚಾರಣೆ ನಡೆಸಲಾಗಿದೆ. 18 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಪ್ರಕರಣದಲ್ಲಿ ಅಮೃತ್​ ಪೌಲ್​ ಪಾತ್ರ ಇರುವ ವಿಚಾರ ತಿಳಿದ ಬಳಿಕ ಅವರನ್ನು ಬಂಧಿಸಲಾಗಿದೆ ಎಂದರು.

ಇದನ್ನೂ ಓದಿ...  ಎಡಿಜಿಪಿ ಅಮೃತ್ ಪೌಲ್ ಬಂಧನ ವಿಚಾರ: ಐಪಿಎಸ್ ಅಧಿಕಾರಿ ಡಿ.ರೂಪಾ ಪ್ರತಿಕ್ರಿಯೆ ಏನು? 

ನಮ್ಮ ಸರಕಾರ ಯಾರನ್ನೂ ರಕ್ಷಿಸುವ ಕೆಲಸ ಮಾಡುವುದಿಲ್ಲ. ಇದೇ ವೇಳೆ ಭ್ರಷ್ಟಾಚಾರ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್​ ಅವರನ್ನು ಬಂಧಿಸಿ  ವಿಚಾರಣೆಯನ್ನ ನಡೆಸಲಾಗುತ್ತಿದೆ ಎಂದು ನುಡಿದರು.

 ಎಲ್ಲ ಅಧಿಕಾರಿಗಳು ಸರಿಯಾಗಿ ‌ಕಾರ್ಯ ನಿರ್ವಹಿಸಬೇಕು. ತಪ್ಪಿತಸ್ಥರು ಎಷ್ಟೇ ದೊಡ್ಡವರು ಆಗಿದ್ದರು ಬಿಡುವ ಪ್ರಶ್ನೆಯೇ ಇಲ್ಲ ಎಂದ ಅವರು, ನಾನು ಸದನದಲ್ಲಿ ತಪ್ಪು ಉತ್ತರ ಕೊಟ್ಟಿಲ್ಲ. ಆಗ ನನಗೆ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೀಗ ಪ್ರಕರಣದ ಮಾಹಿತಿ ಸಿಕ್ಕಿದೆ. ಪಿಎಸ್ಸೈ ನೇಮಕಾತಿ ಅಕ್ರಮದಲ್ಲಿ  ಉತ್ತರ ಪತ್ರಿಕೆ ತಿದ್ದಿರುವುದು ಬೆಳಕಿಗೆ ಬಂದಿದೆ. ತಪ್ಪು ಮಾಡಿದ್ದ, ಡಿವೈಎಸ್ ಪಿ, ದಪೇದಾರ್ ಎಲ್ಲರನ್ನ ವಶಕ್ಕೆ ಪಡೆದಿದ್ದೆವು. ನಾವು ಯಾರನ್ನೂ‌ ರಕ್ಷಿಸುವ ಕೆಲಸ ಮಾಡಿಲ್ಲ ಎಂದು ಆರಗ ಜ್ಞಾನೇಂದ್ರ ನುಡಿದರು.

ಅಕ್ರಮ ಬೆಳಕಿಗೆ ಬಂದ ಕೂಡಲೇ ಸಿಎಂ ಗಮನಕ್ಕೆ ತಂದು ತನಿಖೆಗೆ ಆದೇಶ ಮಾಡಿದ್ದೇ ನಾನು. ಅತ್ಯಂತ ಪಾರದರ್ಶಕ ತನಿಖೆಯನ್ನು ಮಾಡಲಾಗಿದೆ. ಅಕ್ರಮಕ್ಕೆ ಕುಮ್ಮಕ್ಕು ನೀಡಿದ ಎಲ್ಲರನ್ನೂ ಬಂಧಿಸಕಾಗಿದೆ. ಹೀಗಿರುವಾಗ ನನ್ನ ರಾಜೀನಾಮೆ ಪ್ರಶ್ನೆ ಉದ್ಬವಿಸದು ಎಂದು ಆರಗ ಜ್ಞಾನೇಂದ್ರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News