×
Ad

16 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು: ಪಬ್ಲಿಷರ್ ಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಬಿಬಿಎಂಪಿ ಎಚ್ಚರಿಕೆ

Update: 2022-07-05 23:44 IST
ಫೈಲ್ ಚಿತ್ರ

ಬೆಂಗಳೂರು, ಜು.5: ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಿದರೆ, ಕಾಯಿದೆಯ ಅನ್ವಯ ಕ್ರಮ ಜರುಗಿಸಲಾಗುವುದು. ಪಬ್ಲಿಷರ್‍ಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ. ದೀಪಕ್ ಆರ್.ಎಲ್ ಎಚ್ಚರಿಕೆ ನೀಡಿದ್ದಾರೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ 16 ಸಾವಿರಕ್ಕೂ ಅಧಿಕ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಲಾಗಿದೆ. ಇದು ಮುಂದೆ ಕಡಿಮೆ ಆಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಓಪನ್ ಪ್ಲೇಸ್ ಆಕ್ಟ್‍ನ ಪ್ರಕಾರ ಬ್ಯಾನರ್ ಅಳವಡಿಸುವವರಿಗೆ ದಂಡವನ್ನು ಹಾಗೂ ಜೈಲು ಶಿಕ್ಷೆಯನ್ನು ವಿಧಿಸಲಾಗವುದು. ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅಧಿಕಾರಿಗೆ ಸೂಕ್ತ ನಿರ್ದೇಶನವನ್ನು ನೀಡಲಾಗುವುದು ಎಂದರು. 

ಫ್ಲೆಕ್ಸ್ ಮತ್ತು ಬ್ಯಾನರ್‍ಗಳನ್ನು ಮುದ್ರಿಸುವ ಮಾಲಕರನ್ನು ಪತ್ತೆಹಚ್ಚಿ ಸೂಕ್ತ ಮಾರ್ಗಸೂಚಿಗಳನ್ನು ಅವರಿಗೆ ನೀಡಲಾಗುತ್ತದೆ. ಇದನ್ನು ಉಲ್ಲಂಘಿಸಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದರು.

ವಾರ್ಡ್ ಮರುವಿಂಗಡನೆಯ ಬಗ್ಗೆ 107 ಅರ್ಜಿಗಳು ಬಂದಿದ್ದು, ಅವನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ ಅವರು, ಗಾಂಧಿನಗರದಲ್ಲಿ ಮಲ್ಟಿ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಾಣವಾಗಲಿದ್ದು, ಟೆಂಡರ್ ಹಂತದಲ್ಲಿದೆ ಎಂದರು. 

ಓಕಳೀಪುರ ಜಂಕ್ಷನ್‍ನಲ್ಲಿ ಎರಡು ಕಾಮಗಾರಿಗಳು ನಡೆಯುತ್ತಿವೆ. ಒಂದು ಬಿಬಿಎಂಪಿ ನಿರ್ವಹಿಸುತ್ತಿದ್ದು, ಮತ್ತೊಂದು ರೈಲ್ವೆ ಇಲಾಖೆ ನಿರ್ವಹಿಸುತ್ತಿದೆ. ಬಿಬಿಎಂಪಿ ವತಿಯಿಂದ ಕಾಮಗಾರಿಗೆ ಸಂಬಂಧಿಸಿದಂತೆ ಸ್ಫೋಟಕ್ಕೆ ಜಿಲೆಟಿನ್ ಅನ್ನು ಬಳಸುತ್ತಿಲ್ಲ. ಒಂದು ವೇಳೆ ಬಳಕೆ ಮಾಡುತ್ತಿದ್ದಲ್ಲಿ ಅದನ್ನು ನಿಲ್ಲಿಸಲು ಸೂಚಿಸಲಾಗುವುದು ಎಂದರು. 

ಇನ್ನು ಮಂತ್ರಿ ಮಾಲ್ ತೆರಿಗೆ ಪಾವತಿ ಬಾಕಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಾಲ್‍ಗೆ ಪದೇಪದೇ ಬೀಗ ಹಾಕದಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ ಬಿಬಿಎಂಪಿ ಕಾಯ್ದೆಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡದಿದ್ದಲ್ಲಿ ಸ್ಥಿರಾಸ್ತಿಯನ್ನು ಅಥವಾ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಉಲ್ಲೇಖಿಸಲಾಗಿದೆ. ಇದನ್ನು ಅನುಷ್ಠಾನಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News