ಚಾಮರಾಜಪೇಟೆ ಬಂದ್ ಮಾಡಿದರೆ ಕಠಿಣ ಕ್ರಮ: ಪೊಲೀಸ್ ಇಲಾಖೆ ಎಚ್ಚರಿಕೆ

Update: 2022-07-06 13:45 GMT
ಫೈಲ್ ಚಿತ್ರ

ಬೆಂಗಳೂರು, ಜು.6: ಚಾಮರಾಜಪೇಟೆ ಆಟದ ಮೈದಾನ ವಿಚಾರಕ್ಕೆ  ಸಂಬಂಧಿಸಿದಂತೆ ಸ್ಥಳೀಯವಾಗಿ ಯಾವುದೇ ಪ್ರತಿಭಟನೆ, ಮುಷ್ಕರ ಅಥವಾ ಬಂದ್ ಮಾಡಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಜು.12ಕ್ಕೆ ಬಂದ್‍ಗೆ ಕರೆ ನೀಡಿರುವ ಮುಖಂಡರಿಗೆ ಇಲ್ಲಿನ ಚಾಮರಾಜಪೇಟೆ ಠಾಣಾ ಪೊಲೀಸರು ತಿಳುವಳಿಕೆ ಪತ್ರ ಬಿಡುಗಡೆ ಮಾಡಿದ್ದು, ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿ, ಪ್ರತಿಭಟನೆ, ಮೆರವಣಿಗೆ ಮಾಡಿ ಬಂದ್ ಮಾಡುವುದು ಸೂಕ್ತ ಕ್ರಮವಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೆ, ಈಗಾಗಲೇ ಹೈಕೋರ್ಟಿನ ಸ್ಪಷ್ಟ ಆದೇಶವಿದ್ದು, ಅದರಂತೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹೊರತುಪಡಿಸಿ ಎಲ್ಲಿಗೂ ಪ್ರತಿಭಟನೆ, ಮುಷ್ಕರ ಮಾಡುವಂತಿಲ್ಲ. ಹೀಗಾಗಿ, ಜು.12ರಂದು ಕರೆ ನೀಡಿರುವ ಚಾಮರಾಜಪೇಟೆ ಬಂದ್‍ಗೆ ಅನುಮತಿ ನೀಡಲಾಗುವುದಿಲ್ಲ.

ಒಂದು ವೇಳೆ ಪ್ರತಿಭಟನೆ ಮಾಡುವುದಾದರೆ, ಇಲ್ಲಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆದು ಫ್ರೀಡಂ ಪಾರ್ಕಿನಲ್ಲಿ ಮಾಡಬಹುದು. ಒಂದು ವೇಳೆ ನಿಯಮ ಉಲ್ಲಂಘಿಸಿ ಸ್ಥಳೀಯವಾಗಿ ಪ್ರತಿಭಟನೆಗೆ ಮುಂದಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ರವಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News