ರಾಜಕೀಯ ಒತ್ತಡದಿಂದ ಬಂಟ್ವಾಳ ಎಎಸ್ಪಿ ವರ್ಗಾವಣೆ: ರಮಾನಾಥ ರೈ ಆರೋಪ

Update: 2022-07-06 14:17 GMT

ಬಂಟ್ವಾಳ : ಬಂಟ್ವಾಳ ಮತ್ತು ಬೆಳ್ತಂಗಡಿ ಶಾಸಕರ ಬೆಂಬಲದಿಂದ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ, ಮರಳು ದಂಧೆ, ಜುಗಾರಿ ದಂಧೆಗಳಿಗೆ ಕಡಿವಾಣ ಹಾಕಿದ ಕಾರಣಕ್ಕೆ ಎಎಸ್ಪಿ ಶಿವಾಂಶು ರಜಪೂತ್ ಅವರನ್ನು ರಾಜಕೀಯ ಒತ್ತಡದಿಂದ ವರ್ಗಾವಣೆ ಮಾಡಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಎಸ್ಪಿಯದ್ದು ರಾಜಕೀಯ ಪ್ರೇರಿತ ವರ್ಗಾವಣೆ.  ಒಳ್ಳೆಯ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ಹಠಾತ್ತಾಗಿ ವರ್ಗಾವಣೆ ಮಾಡಿದ್ದಾರೆ. ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದರು.

ಅನಂತಾಡಿಯಲ್ಲಿ ಗಣಿಗಾರಿಕೆಯಿಂದ ಗುಹಾತೀರ್ಥಕ್ಕೆ ತೊಂದರೆ ಆಗುತ್ತಿರುವುದರ ವಿರುದ್ದ ನಾವು ಮಾಡಿದ್ದೆವು.  ಬಿಜೆಪಿಯವರು ಬೇರೆಯವರಿಗೆ ಬುದ್ಧಿವಾದ ಹೇಳುತ್ತಾರೆ‌. ಆದರೆ ಅವರಿಗೆ ಜನರೇ ಬುದ್ಧಿ ಹೇಳಬೇಕು ಎಂದರು. 

ಜಿಲ್ಲೆಯಲ್ಲಿ ಒಂದು ಲೋಡ್ ಮರಳಿಗೆ 15 ಸಾವಿರ ರೂ. ಕೊಡಬೇಕಾದ ಪರಿಸ್ಥಿತಿ ಇದೆ. ಮನೆ ಕಟ್ಟುವವರು ಸಂಕಷ್ಟ ಪಡುತ್ತಿದ್ದಾರೆ. ತಾಲೂಕಿನ ಒಂದು ಕಡೆ ಪರವಾನಗಿ ತೆಗೆದುಕೊಂಡವರು ಎಲ್ಲ ಕಡೆಗಳಲ್ಲೂ ಮರಳುಗಾರಿಕೆ ಮಾಡುತ್ತಾರೆ ಎಂದು ರೈ ಆರೋಪಿಸಿದರು.

ತಾಲೂಕಿನಲ್ಲಿ ಜೂಜು ಅಡ್ಡೆ ಹೆಚ್ಚುತ್ತಿದ್ದು ಜೂಜು ಅಡ್ಡೆಯ ಬಳಿಯೇ ಕೊಲೆ ಯತ್ನ, ಹಲ್ಲೆ ಪ್ರಕರಣ ನಡೆದದ್ದು ವರದಿಯಾಗಿವೆ. ಹೆಣ್ಣುಮಕ್ಕಳ ಕರಿಮಣಿ ಅಡವಿಟ್ಟು ಜುಗಾರಿ ದಂಧೆಯಲ್ಲಿ ತೊಡಗಿಸಿಕೊಂಡವರಿದ್ದಾರೆ. ಜುಗಾರಿ ಅಡ್ಡೆಯನ್ನು ನಿಯಂತ್ರಿಸಿದ ಕಾರಣಕ್ಕೆ ಎಎಸ್ಪಿಯನ್ನೇ ವರ್ಗಾವಣೆ ಮಾಡಿದ್ದಾರೆ ಎಂದರು. 

ಮರಳುಗಾರಿಕೆಯಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಅಕ್ರಮ ಮರಳುಗಾರಿಕೆ ಬೆಳ್ತಂಗಡಿ ಮತ್ತು ಬಂಟ್ವಾಳದ ಇಬ್ಬರೂ ಶಾಸಕರ ಬೆಂಬಲ ಇದೆ ಎಂದು ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಅಲಿ, ಸುಭಾಶ್ಚಂದ ಶೆಟ್ಟಿ ಕೊಳ್ನಾಡು, ಮುರಳೀಧರ ರೈ ಮಠಂತಬೆಟ್ಟು, ಪ್ರಸಾದ್ ಕೌಶಲ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಮಾನಾಥ ರೈ, ಮುಹಮ್ಮದ್ ಬಡಗನ್ನೂರು, ಪದ್ಮನಾಭ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News