ಸಚಿವ ಅಶ್ವತ್ಥನಾರಾಯಣ, ವಿಜಯೇಂದ್ರರನ್ನು ವಿಚಾರಣೆಗೆ ಒಳಪಡಿಸಿ: ಆಪ್ ಆಗ್ರಹ

Update: 2022-07-06 15:31 GMT

ಬೆಂಗಳೂರು, ಜು.6: ಎಸಿಬಿ ಎಡಿಜಿಪಿ ಸೀಮಂತ್‍ಕುಮಾರ್ ಸಿಂಗ್ ಹಾಗೂ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ವಿರುದ್ಧದ ಆರೋಪಗಳಲ್ಲಿ ಸಚಿವ ಅಶ್ವತ್ಥ್ ನಾರಾಯಣ್, ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಸರು ಕೇಳಿಬರುತ್ತಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಮಾತ್ರ ಅಕ್ರಮಗಳು ಸಂಪೂರ್ಣವಾಗಿ ಬಯಲಾಗಲಿವೆ ಎಂದು ಮಾಜಿ ಕೆಎಎಸ್ ಅಧಿಕಾರಿ ಹಾಗೂ ಎಎಪಿ ರಾಜ್ಯ ವಕ್ತಾರರಾದ ಕೆ.ಮಥಾಯಿ ಆಗ್ರಹಿಸಿದ್ದಾರೆ.

ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಅಮೃತ್ ಪೌಲ್ ಅವರ ಅಧಿಕಾರಾವಧಿಯಲ್ಲಿ ನಡೆದ ಸೀನ್ ಆಫ್ ಕ್ರೈಮ್ ಆಫೀಸರ್‍ಗಳ ನೇಮಕಾತಿ ಪ್ರಕ್ರಿಯೆಯಲ್ಲೂ ಭಾರೀ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಅವರ ಅಧಿಕಾರಾವಧಿಯಲ್ಲಿ ನಡೆದ ಎಲ್ಲ ನೇಮಕಾತಿ ಪ್ರಕ್ರಿಯೆಗಳ ಸಮಗ್ರ ತನಿಖೆಯಾಗಬೇಕು ಅವರು ಸರಕಾರಕ್ಕೆ ಒತ್ತಾಯಿಸಿದರು.

ಆಮ್ ಆದ್ಮಿ ಪಾರ್ಟಿ ಬೆಂಗಳೂರು ಕಾನೂನು ಘಟಕದ ಅಧ್ಯಕ್ಷ ಮಂಜುನಾಥ ಸ್ವಾಮಿ, ರವಿಚಂದ್ರ ನೆರಬಿಂಚಿ, ಗಂಗಾಧರ್ ಮತ್ತಿತರ ಕಾನೂನು ಘಟಕದ ಸದಸ್ಯರುಗಳು ಭಾಗವಹಿಸಿದ್ದರು.

ನ್ಯಾಯಾಧೀಶರಿಗೆ ಎಎಪಿ ನೈತಿಕ ಬೆಂಬಲ

ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಘಟನೆ ನಡೆದಿರುವುದು ಅತ್ಯಂತ ಆಘಾತಕಾರಿ ಬೆಳವಣಿಗೆ ಆಗಿದ್ದು, ಭ್ರಷ್ಟ ಬಿಜೆಪಿಯ ಶೇ.40 ಸರಕಾರವು ಉಚ್ಚ ನ್ಯಾಯಾಲಯವನ್ನೂ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಅವ್ಯಾಹತವಾಗಿ ಅಕ್ರಮ ನಡೆಸಲು ಯತ್ನಿಸುತ್ತಿದೆ. ಇದನ್ನು ವಿಫಲಗೊಳಿಸಲು ಎಸಿಬಿಯ ಭ್ರಷ್ಟಾಚಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾ. ಎಚ್.ಸಿ.ಸಂದೇಶ್ ಅವರಿಗೆ ಬೆದರಿಕೆ ಹಾಕಲಾಗಿದೆ. ನ್ಯಾಯಾಧೀಶರ ಮೇಲೆ ಒತ್ತಡ ಹಾಕುವ ಮೂಲಕ ಸಂವಿಧಾನದ ಆಶಯವನ್ನು ಬುಡಮೇಲು ಮಾಡುತ್ತಿದೆ. ಸರಕಾರ ಕುತಂತ್ರಕ್ಕೆ ಮಣಿಯದ ನ್ಯಾ. ಎಚ್.ಸಿ.ಸಂದೇಶ್‍ರವರಿಗೆ ಪಕ್ಷವು ನೈತಿಕ ಬೆಂಬಲ ನೀಡುತ್ತಿದೆ.

-ಲಕ್ಷ್ಮೀಕಾಂತ್ ರಾವ್, ಎಎಪಿ ಕಾನೂನು ಘಟಕದ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News