ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ: ಅಮೃತ್ ಪೌಲ್ ನಿವಾಸದ ಮೇಲೆ ಸಿಐಡಿ ದಾಳಿ

Update: 2022-07-06 15:53 GMT

ಬೆಂಗಳೂರು, ಜು.6: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಎಡಿಜಿಪಿ ಅಮೃತ್ ಪೌಲ್ ಮಾಲಕತ್ವದ ಹಲವು ಆಸ್ತಿ, ನಿವಾಸದ ಮೇಲೆ ಸಿಐಡಿ ತನಿಖಾಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಕೋರ್ಟ್‍ನಿಂದ ಸರ್ಚ್ ವಾರೆಂಟ್ ಪಡೆದು ಪ್ರಮುಖವಾಗಿ ಇಲ್ಲಿನ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೊಬಳಿಯ ಹುಸಹುಡ್ಯಾ ಗ್ರಾಮದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೃಷಿ ಭೂಮಿ ಖರೀದಿ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಅದೇರೀತಿ, ಬೆಂಗಳೂರಿನ ಸಹಕಾರ ನಗರದಲ್ಲಿರುವ ಮನೆಗೆ ಪೌಲ್ ಅವರ ಉಪಸ್ಥಿತಿಯಲ್ಲಿ ತೆರಳಿ ಪರಿಶೀಲನೆ ನಡೆಸಿದರು. ಮನೆಯಲ್ಲಿದ್ದ ದಾಖಲಾತಿಗಳನ್ನು ಜಪ್ತಿ ಮಾಡಿ, ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ನೇಮಕಾತಿ ಅಕ್ರಮದಿಂದ ಬಂದ ಕೋಟ್ಯಂತರ ರೂಪಾಯಿ ಹಣದಲ್ಲಿ ಪೌಲ್ ಅವರಿಗೆ ಶೇ.20 ರಷ್ಟು ಪಾಲು ಸೇರಿರುವ ಮಾಹಿತಿ ಆಧಾರದ ಮೇಲೆ ದಾಳಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News