ಹಿಲ್ಡಾ ರಾಯಪ್ಪನ್ ಸೇವೆಗೆ ಮನಸೋತ ಬಾಲಿವುಡ್ ನಟ ಸೋನು ಸೂದ್

Update: 2022-07-06 15:55 GMT

ಮಂಗಳೂರು: ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಬಾಲಿವುಡ್‌ನ ಖ್ಯಾತ ನಟ ಸೋನು ಸೂದ್ ಮಂಗಳೂರಿನ ಡಾ. ಹಿಲ್ಡಾರಾಯಪ್ಪನ್ ಅವರ ಮಾನವೀಯ ಸೇವೆಗಳಿಗೆ ಮನಸೋತಿದ್ದಾರೆ.

ಮಂಗಳೂರಿನಲ್ಲಿ  ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್, ಡಿ ಎಡಿಕ್ಷನ್ ಸೆಂಟರ್, ಚಿಣ್ಣರ ಧಾಮದ ಮೂಲಕ ಮಾನವೀಯ ಸೇವೆಗಳ ಮೂಲಕ ಗುರುತಿಸಿಕೊಂಡಿರುವ ಡಾ. ಹಿಲ್ಡಾ ರಾಯಪ್ಪನ್ ಅವರನ್ನು ಭೇಟಿಯಾಗಿ ಅವರ ನೇತೃತ್ವದಲ್ಲಿ ಮುನ್ನೆಡಸಲಾಗುತ್ತಿರುವ ನಗರದ ಕೆಲವು ಸಂಸ್ಥೆಗಳಿಗೆ ಅವರು ಇಂದು ಭೇಟಿ ನೀಡಿದರು.

ಇಂದು ಮಧ್ಯಾಹ್ನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಟ ಸೋನು ಸೂದ್ ಅವರನ್ನು ಪ್ರಜ್ಞೌ ಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕಿ ಡಾ. ಹಿಲ್ಡಾ ರಾಯಪ್ಪನ್ ಸ್ವಾಗತಿಸಿದರು.

ಬಳಿಕ ಮುಡಿಪುವಿನ ಒಕೇಶನಲ್ ಟ್ರೇನಿಂಗ್ ಸೆಂಟರ್ ಹಾಗೂ ಬಿಜೈ ಕಾಪಿಕಾಡ್‌ನಲ್ಲಿರುವ ನಿರ್ಗತಿಕ, ಬಾಲ ಕಾರ್ಮಿಕರಾಗಿ ಪತ್ತೆಯಾದ ಮಕ್ಕಳಿಗೆ ಆಶ್ರಯ ನೀಡುವ ‘ಚಿಣ್ಣರ ತಂಗುಧಾಮ’ಕ್ಕೆ ಭೇಟಿ ನೀಡಿದರು.

‘‘ಕೋವಿಡ್ ಸಂದರ್ಭ ಸೇರಿದಂತೆ ದೇಶಾದ್ಯಂತ ಹಲವಾರು ಮಾನವೀಯ ಸೇವೆಗಳ ಮೂಲಕ ಗುರುತಿಸಿಕೊಂಡಿರುವ ಬಾಲಿವುಡ್ ನಟ ಮಂಗಳೂರಿನಲ್ಲಿ ನಮ್ಮ ಕೇಂದ್ರ ನೀಡುತ್ತಿರುವ ಸೇವೆಗಳನ್ನು ನೋಡುವ ಸಲುವಾಗಿ ಇಂದು ಬಂದಿದ್ದಾರೆ. ಅವರು ಮುಡಿಪುವಿನ ಒಕೇಶನಲ್ ಟ್ರೇನಿಂಗ್ ಸೆಂಟರ್‌ಗೆ ಭೇಟಿ ನೀಡಿದ್ದಾರೆ.

ಇಲ್ಲಿ ಕಂಪ್ಯೂಟರ್, ಬ್ಯುಟಿಶಿಯನ್, ಡ್ರೈವಿಂಗ್, ಇಲೆಕ್ಟ್ರಿಶಿಯನ್, ಫ್ಯಾಶನ್ ಡಿಸೈನಿಂಗ್ ಮೊದಲಾದ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ. ಕಳೆದ ಸುಮಾರು ಒಂದು ವರ್ಷದಿಂದ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯಲ್ಲಿ ಈಗಾಗಲೇ ೨೦೮ ಮಂದಿಗೆ ತರಬೇತಿ ನೀಡಲಾಗಿದೆ. ಪ್ರಸ್ತುತ ೭೮ ತರಬೇತಿ ನೀಡಲಾಗುತ್ತಿದೆ. ಅದನ್ನೆಲ್ಲಾ ಇಂದು ಅವರು ವೀಕ್ಷಿಸಿದ್ದಾರೆ’’ ಎಂದು ಡಾ. ಹಿಲ್ಡಾ ರಾಯಪ್ಪನ್ ಹೇಳಿದರು.

ಬಳಿಕ ಬಿಜೈನ ಚಿಣ್ಣರ ತಂಗುಧಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ಡಾ. ಹಿಲ್ಡಾ ರಾಯಪ್ಪನ್ ಉಪಸ್ಥಿತರಿದ್ದರು.

ಕೋವಿಡ್ ಸಂದರ್ಭದಲ್ಲಿ ಮಂಗಳೂರಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಮಂಗಳೂರಿಗೆ ರವಾನಿಸಿ ತನ್ನ ಮಾನವೀಯ ಸೇವೆಯ ಮೂಲಕ ಸೋನು ಸೂದ್ ಮಂಗಳೂರಿನಲ್ಲಿಯೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News