ಝಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ: ದಾಖಲಾತಿ ಪರಿಶೀಲನೆ
ಬೆಂಗಳೂರು, ಜು.6: ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್‍ಖಾನ್ ಅವರ ನಿವಾಸ ಸೇರಿದಂತೆ ಐದು ಕಡೆಗಳಲ್ಲಿ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು, ಆಸ್ತಿ, ಹಣಕಾಸು ವಾಹಿವಾಟು ಸಂಬಂಧ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳವಾರ ಏಕಕಾಲದಲ್ಲಿ ಐದು ಕಡೆಗಳಲ್ಲಿ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳ ತಂಡ, ಬುಧವಾರ ಜಪ್ತಿ ಮಾಡಿಕೊಂಡಿದ್ದ ದಾಖಲಾತಿಗಳನ್ನು ಹಂತ ಹಂತವಾಗಿ ಪರಿಶೀಲನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಪ್ರಮುಖವಾಗಿ ಇಲ್ಲಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿರುವ ಝಮೀರ್ ಅವರ ನಿವಾಸವು ದುಬಾರಿ ಬೆಲೆ ಹೊಂದಿದೆ. ಈ ಮನೆ ಖರೀದಿಗೆ ಹಣ ಹೊಂದಿಸಿರುವ ಕುರಿತು ಅವರನ್ನು ಪ್ರಶ್ನಿಸಿ ದಾಖಲಾತಿ ಕೇಳಿದ್ದಾರೆ ಎನ್ನಲಾಗಿದೆ. ಅದೇರೀತಿ, ಟ್ರಾವೆಲ್ಸ್ ಸಂಸ್ಥೆ ಹೊಂದಿರುವ ಕುರಿತು ದಾಖಲಾತಿ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಏಕೆ ದಾಳಿ?: 2021ರ ಆಗಸ್ಟ್ ನಲ್ಲಿ ಝಮೀರ್‍ಅಹ್ಮದ್ ಅವರ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ತನಿಖೆ ಕೈಗೊಂಡಿತ್ತು. ಇದಾದ ಬಳಿಕ ಆಸ್ತಿಗಳ ಮೌಲ್ಯಮಾಪನ ಮಾಡಿ ಸಲ್ಲಿಸಿದ್ದ ವರದಿ ಆಧರಿಸಿ ಎಸಿಬಿ ಮಂಗಳವಾರ ದಾಳಿ ನಡೆಸಿ, ಶೋಧ ಕೈಗೊಂಡಿತ್ತು.