VIDEO- ತಿದ್ದುಪಡಿ ಆದೇಶದಲ್ಲಿ ಎಂಥ ಮಣ್ಣು ಇಲ್ಲ: ಬರಗೂರು ರಾಮಚಂದ್ರಪ್ಪ

Update: 2022-07-06 17:25 GMT

ಬೆಂಗಳೂರು, ಜು.6: ಒಂದು ಸಮುದಾಯವನ್ನು ಸಮಾಧಾನ ಮಾಡಲು ಮೇಲ್ನೋಟಕ್ಕೆ ರಾಜ್ಯ ಸರಕಾರ ತಿದ್ದುಪಡಿ ಆದೇಶ ಪ್ರಕಟಿಸಲಾಗಿದೆ. ಆದರೆ, ಈ ಆದೇಶದಲ್ಲಿ ಎಂಥ ಮಣ್ಣು ಇಲ್ಲ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಬುಧವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯಿಂದ ಪರಿಷ್ಕರಣೆಯಾದ ಇಡೀ ಪರಿಷ್ಕರಣೆಯೇ ದಲಿತ, ಮಹಿಳಾ ವಿರೋಧಿಯಾಗಿದ್ದು, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗಿದೆ ಎಂದು ಟೀಕಿಸಿದರು.

ನನ್ನ ಸಮಿತಿಯಿಂದ ರಚನೆಯಾದ ಪಠ್ಯಗಳು ಶ್ರೇಷ್ಠ ಎನ್ನುವ ಭಾವನೆ ನನ್ನದಲ್ಲ. ಅಲ್ಲೂ ತಪ್ಪಿದ್ದರೆ ಖಂಡಿತ ತಿದ್ದುಪಡಿಯಾಗಲಿ. ಆದರೆ, ಧಾರ್ಮಿಕ ಮೂಲಭೂತವಾದ ಮಕ್ಕಳ ಪಠ್ಯದಲ್ಲಿ ಸೇರಿಸುವ ಮೂಲಕ ಸತ್ಯಗಳನ್ನೇ ಮರೆಮಾಚುವುದು ಆತಂಕದ ನಡೆ ಎಂದರು.

ಸಮಗ್ರ ಪರಿಷ್ಕರಣೆ ಮಾಡಲು ನಮಗೆ ಅವಕಾಶ ಒದಗಿಸಲಾಗಿತ್ತು. ಹಿಂದಿನ ಸಮಿತಿಯ ಬಗ್ಗೆಯಾಗಲಿ ಅಥವಾ ಆ ಸಮಿತಿಯ ಸದಸ್ಯರ ಬಗ್ಗೆಯಾಗಲಿ ನಾವು ಒಂದೂ ಮಾತು ಆಡಲಿಲ್ಲ. ಆದರೆ ರೋಹಿತ್ ಚಕ್ರತೀರ್ಥ ವ್ಯಕ್ತಿ ಕೇಂದ್ರಿತವಾಗಿ ದಾಳಿಗೆ ಮುಂದಾಗುತ್ತಾರೆ. ಬಹಿರಂಗ ಸಭೆಗೆ ಆಹ್ವಾನಿಸುತ್ತಾರೆ. ಒಬ್ಬ ಟ್ರೋಲ್ ತಜ್ಞ(ರೋಹಿತ್ ಚಕ್ರತೀರ್ಥ)ನ ಜೊತೆ ಸಮಾಲೋಚನೆ ನಡೆಸಲು ಆಗುತ್ತಾ ಎಂದು ಪ್ರಶ್ನಿಸಿದರು.

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಮಾತನಾಡಿ, ಪರಷ್ಕೃತ ಪಠ್ಯಪುಸ್ತಕ ವಿವಾದದಲ್ಲಿ ಸರಕಾರದ ಮೊಂಡುತನ ಯಾವುದೇ ಕಾರಣಕ್ಕೂ ಸರಿಯಲ್ಲ. ಜನಾಭಿಪ್ರಾಯ ಗೌರವಿಸುವುದನ್ನು ಸರಕಾರ ಮೊದಲು ಕಲಿಯಬೇಕು. ಹೊಸ ಸಮಿತಿಯಿಂದ ಪರಿಷ್ಕರಣೆಯಾದ ಪಠ್ಯಪುಸ್ತಕಗಳು ಸರಿ ಇದೆ ಎಂದು ಯಾವುದಾದರೂ ಒಂದು ಪತ್ರಿಕೆ ಹೇಳಿದೆಯಾ ಎಂದು ಕೇಳಿದರು.

ಮಕ್ಕಳ ವಿಚಾರದಲ್ಲಿ ಹಠಮಾರಿ ಧೋರಣೆ ಸರಿಯಲ್ಲ. ಪಠ್ಯ ವಿವಾದದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡು ಬರಗೂರು ರಾಮಚಂದ್ರಪ್ಪ ಅವರ ಸಮಿತಿಯ ಪಠ್ಯಗಳನ್ನೇ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು.

ಲೇಖಕಿ ಕೆ.ಆರ್.ಸೌಮ್ಯಾ ಮಾತನಾಡಿ, ಮಹಾ ಹುಚ್ಚರನ್ನು ಈ ಬಿಜೆಪಿ ಸರಕಾರದಲ್ಲಿ ನೋಡುತ್ತಿದ್ದೇನೆ. ಪುರೋಹಿತಶಾಹಿ ಬೀಜಗಳನ್ನು ಶಾಲೆಗಳಲ್ಲಿ ಬಿತ್ತಲಾಗುತ್ತಿದೆ. ಟಿಪ್ಪು ವಿಚಾರ ಕಿತ್ತು ಹಾಕಲು ಹೋಗಿ ಕರ್ನಾಟಕ ಸಂಸ್ಕøತಿಯನ್ನೇ ಪಠ್ಯಪುಸ್ತಕಗಳಿಂದ ಕಿತ್ತುಹಾಕಲಾಗಿದೆ. ಈ ಬಗ್ಗೆ ಧ್ವನಿ ಎತ್ತಬೇಕಾದ ಚಿತ್ರದುರ್ಗದ ಮುರುಘಾ ಶರಣರು, ಚಂದ್ರಶೇಖರ್ ಕಂಬಾರರು, ಗುರುರಾಜ ಕರ್ಜಗಿ ಹಾಗೂ ನಾ. ಸೋಮಶೇಖರ್ ಅವರೆಲ್ಲರ ಬಾಯಿಗೆ ಏನಾಗಿದೆ ಎಂದು ಪ್ರಶ್ನೆ ಮಾಡಿದರು.  

ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಂತಕ ಜಿ.ಬಿ.ಪಾಟೀಲ್, 1969ರ ಕೊಠಾರಿ ಆಯೋಗದ ವರದಿ ಮುಂದುವರಿಯಬೇಕು. ಎನ್‍ಸಿಆರ್‍ಟಿ ಪಠ್ಯಪುಸ್ತಕಗಳು ಮುಂದುವರಿಯಬೇಕು. ಈ ಬಗ್ಗೆ ಈ ಸಭೆ ನಿರ್ಣಯಗಳನ್ನು ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವೆ ಬಿ.ಟಿ.ಲಲತಾನಾಯಕ್, ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ, ಹೋರಾಟಗಾರರಾದ ಪ್ರಭಾ ಬೆಳವಂಗಲ, ಮಂಜುನಾಥ್ ಅದ್ದೆ, ಗಂಗಾಧರಮೂರ್ತಿ ಎಲ್., ಸೂರ್ಯ ಮುಕುಂದರಾಜ್, ಮಾವಳ್ಳಿ ಶಂಕರ್, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಸೇರಿದಂತೆ ಪ್ರಮುಖರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News