'ಕಾಡಮಲ್ಲಿಗೆ' ಖ್ಯಾತಿಯ ಯಕ್ಷಗಾನ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ ನಿಧನ

Update: 2022-07-07 05:39 GMT

ಬೆಳ್ಳಾರೆ, ಜು.7: 'ಕಾಡಮಲ್ಲಿಗೆ' ಖ್ಯಾತಿಯ ಹಿರಿಯ ಯಕ್ಷಗಾನ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ(73) ಅಲ್ಪಕಾಲದ ಅಸೌಖ್ಯದಿಂದ ಕೆಯ್ಯೂರು ಗ್ರಾಮದ ಸಂತೋಷ್ ನಗರದ ಮನೆಯಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಬೆಳ್ಳಾರೆಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

ಬೆಳ್ಳಾರೆಯ ಸುಬ್ಬಯ್ಯ ರೈ ಮತ್ತು ಮಂಜಕ್ಕೆ ರೈಯವರ ಪುತ್ರರಾಗಿರುವ ವಿಶ್ವನಾಥ ರೈ, ಕರ್ನಾಟಕ ಮೇಳ ಒಂದರಲ್ಲೇ 35 ವರ್ಷಗಳ ಕಾಲ ತಿರುಗಾಟ ನಡೆಸಿದ್ದಾರೆ. ಸುರತ್ಕಲ್ ಮೇಳದಲ್ಲಿ 5 ವರ್ಷ, ಕದ್ರಿ ಮೇಳದಲ್ಲಿ ಎರಡು ವರ್ಷ, ಕುಂಟಾರು ಮೇಳದಲ್ಲಿ ಎರಡು ವರ್ಷ, ಬಪ್ಪನಾಡು ಮೇಳದಲ್ಲಿ ಒಂದು ವರ್ಷ, ಕಟೀಲು ಮೇಳದಲ್ಲಿ ಮೂರು ವರ್ಷ, ಎಡನೀರು ಮೇಳದಲ್ಲಿ ಒಂದು ವರ್ಷ ತಿರುಗಾಟವನ್ನ ನಡೆಸಿದ್ದಾರೆ.

ಖ್ಯಾತ ಯಕ್ಷಗಾನ ಕಲಾವಿದ ಅಚ್ಯುತ ಮಣಿಯಾಣಿಯವರಿಂದ ಯಕ್ಷ ನಾಟ್ಯಾಭ್ಯಾಸ ತರಬೇತಿ ಪಡೆದಿದ್ದು, 9ನೇ ವರ್ಷದಲ್ಲಿ ಯಕ್ಷ ಲೋಕವನ್ನು ಪ್ರವೇಶಿಸಿದರು.

ಕರ್ನಾಟಕ ಮೇಳದಲ್ಲಿ ಮಂಡೆಚ್ಚ, ಅಳಿಕೆ, ಸಾಮಗ, ಬೋಳಾರ, ಮಿಜಾರು, ಪುಳಿಂಚ ಮೊದಲಾದ ಮಹಾನ್ ಯಕ್ಷಗಾನ ಗುರು, ಮಹಾನ್ ಚೇತನಗಳ ಒಡನಾಡಿಯಾಗಿದ್ದಾರು. ಬೋಳಾರ ಪ್ರಶಸ್ತಿ, ಅಳಿಕೆ ಯಕ್ಷನಿಧಿ, ಪುಳಿಂಚ ರಾಮಯ್ಯ ಶೆಟ್ಟಿ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News