ದ.ಕ.ಜಿಲ್ಲೆಯಲ್ಲಿ ಭಾರೀ ಮಳೆ; ಆತಂಕದ ಕ್ಷಣ ಎದುರಿಸುತ್ತಿರುವ ಕಡಲ ತೀರದ ಮನೆಮಂದಿ

Update: 2022-07-07 15:56 GMT

ಮಂಗಳೂರು: ದ.ಕ.ಜಿಲ್ಲೆಗಳಲ್ಲಿ ಗುರುವಾರ ಭಾರೀ ಮಳೆಯಾಗಿದ್ದು, ಜನಜೀವನ ವಸ್ತುಶಃ ಅಸ್ತವ್ಯಸ್ಥಗೊಂಡಿವೆ. ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಹಲವು ಕಡೆ ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ, ಮನೆಗಳಿಗೆ ನೀರು ನುಗ್ಗುವುದು ಇತ್ಯಾದಿ ಪ್ರಕೃತಿ ವಿಕೋಪ ನಡೆಯುತ್ತಲಿದೆ.

ಗುರುವಾರ ಉಳ್ಳಾಲ ಸಮೀಪದ ಬಟಪಾಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿವೆ. ಪಣಂಬೂರು ಕಡಲು ಕೂಡ ಪ್ರಕ್ಷುಬ್ಧಗೊಂಡಿವೆ. ಬಟಪಾಡಿ ಸಹಿತ ಕಡಲ ತೀರದ ಹಲವು ಮನೆಗಳು ಅಪಾಯದಲ್ಲಿದ್ದು, ಮನೆ ಮಂದಿ ತೀವ್ರ ಆತಂಕಿತರಾಗಿದ್ದಾರೆ. ಗುರುವಾರ ಕಡಲ್ಕೊರೆತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರ ಮುಂದೆ ಕಡಲ ತೀರದ ಜನರು ಕಡಲ್ಕೊರೆತ ತಡೆಗಟ್ಟಲು ಆಗ್ರಹಿಸಿದ್ದಾರೆ. ನಗರ ಹೊರವಲಯದ ಕಣ್ಣೂರಿನಲ್ಲಿ ಗುಡ್ಡ ಕುಸಿದು ಮನೆಯೊಂದು ಅಪಾಯದ ಅಂಚಿನಲ್ಲಿದೆ.

ಅಪಾರ ಹಾನಿ

ದ.ಕ.ಜಿಲ್ಲೆಯಲ್ಲಿ ಸತತವಾಗಿ ಸುರಿಯುವ ಮಳೆಯಿಂದ ಪ್ರಕೃತಿ ವಿಕೋಪ ಹೆಚ್ಚಾಗಿವೆ. ಹಾನಿಯ ಪ್ರಮಾಣವೂ ಅಧಿಕವಾಗಿದೆ.  ಜಿಲ್ಲೆಯಲ್ಲಿ ಗುರುವಾರ ೨ ಮನೆಗಳು ಸಂಪೂರ್ಣ ನೆಲಸಮವಾಗಿದೆ. ಅಲ್ಲದೆ ೧೧ ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಒಟ್ಟಾರೆ ಈವರೆಗೆ ೫೧ ಮನೆಗಳು ಸಂಪೂರ್ಣ ಮತ್ತು ೩೮೭ ಮನೆಗಳಿಗೆ ಭಾಗಶಃ ಹಾನಿಯಾಗಿವೆ.

ಗುರುವಾರ ೯೬ ವಿದ್ಯುತ್ ಕಂಬಗಳ ಸಹಿತ ಜಿಲ್ಲೆಯಲ್ಲಿ ಈವರೆಗೆ ೨೭೪೨ ಕಂಬಗಳು ನೆಲಕ್ಕೆ ಉರುಳಿವೆ. ಒಂದು ಸೇತುವೆಗೆ ಹಾನಿಯಾಗಿವೆ. ಅಲ್ಲದೆ ೪ ಟ್ರಾನ್ಸ್‌ಫಾರ್ಮರ್ ಸಹಿತ ಈವರೆಗೆ ೧೯೩ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ ಎಂದು ದ.ಕ. ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಶಾಲಾ ಕಾಲೇಜುಗಳಿಗೆ ರಜೆ

ಜು.8 ಮತ್ತು 9ರಂದು ರಾಜ್ಯ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಹಾಗಾಗಿ ಜು.8 ಮತ್ತು 9ರಂದು (ಶುಕ್ರವಾರ ಮತ್ತು ಶನಿವಾರ) ಕೂಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಮತ್ತು ಪದವಿ ಪೂರ್ವ ಹಾಗೂ ಸ್ನಾತಕ್ಕೋತ್ತರ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್, ಐಟಿಐ ಸಂಸ್ಥೆಗಳಿಗೆ ರಜೆ ಘೋಷಿಸಿ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News