ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ ತ್ವರಿತ ಶಮನ: ಚೀನಾಕ್ಕೆ ಭಾರತ ಕರೆ

Update: 2022-07-07 16:20 GMT

ಜಕಾರ್ತ, ಜು.7: ಚೀನಾದ ವಿದೇಶಾಂಗ ಸಚಿವ ವಾಂಗ್ ಯಿಯನ್ನು ಭೇಟಿಯಾದ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಪೂರ್ವ ಲಡಾಕ್ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯುದ್ದಕ್ಕೂ ಬಾಕಿ ಉಳಿದಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರದ ಅಗತ್ಯವನ್ನು ಒತ್ತಿಹೇಳಿದ್ದಾರೆ ಎಂದು ಭಾರತ ಸರಕಾರ ಹೇಳಿದೆ. 

ಇಂಡೋನೇಶ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ದೇಶಗಳ ಸಮಾವೇಶದಲ್ಲಿ ಎರಡು ಸಚಿವರು ಪರಸ್ಪರ ಭೇಟಿಯಾದರು. ಶಾಂತಿ ಕಾಪಾಡಲು ಗಡಿ ಪ್ರದೇಶದಿಂದ ಸಂಪೂರ್ಣವಾಗಿ ಹಿಂದೆ ಸರಿಯುವ ಅಗತ್ಯವನ್ನು ಜೈಶಂಕರ್ ಪ್ರತಿಪಾದಿಸಿದರು. ದ್ವಿಪಕ್ಷೀಯ ಒಪ್ಪಂದ ಮತ್ತು ಶಿಷ್ಟಾಚಾರವನ್ನು ಸಂಪೂರ್ಣವಾಗಿ ಪಾಲಿಸುವ ಪ್ರಾಮುಖ್ಯತೆಗಳನ್ನು ಮತ್ತು ಈ ಹಿಂದೆ ಇಬ್ಬರ ಮಧ್ಯೆ ನಡೆದ ಮಾತುಕತೆಯಲ್ಲಿ ಸಾಧಿಸಲಾದ ತಿಳುವಳಿಕೆಗಳಿಗೆ ಬದ್ಧರಾಗುವ ಅಗತ್ಯವನ್ನು ಪುನರುಚ್ಚರಿಸಿದರು ಎಂದು ಸರಕಾರದ ಹೇಳಿಕೆ ತಿಳಿಸಿದೆ.
 ಉಭಯ ದೇಶಗಳ ಸೇನಾಧಿಕಾರಿಗಳು ಹಾಗೂ ರಾಜತಾಂತ್ರಿಕರ ಮಧ್ಯೆ ನಿರಂತರ ಸಂಪರ್ಕವಿರಬೇಕು ಮತ್ತು ಉಭಯ ದೇಶಗಳ ಹಿರಿಯ ಸೇನಾ ಕಮಾಂಡರ್ಗಳ ಮಧ್ಯೆ ಹೆಚ್ಚು ವಿಳಂಬವಿಲ್ಲದೆ ಮುಂದಿನ ಸುತ್ತಿನ ಮಾತುಕತೆ ನಡೆಯುವ ವಿಶ್ವಾಸವನ್ನು ಉಭಯ ಸಚಿವರೂ ವ್ಯಕ್ತಪಡಿಸಿದರು.
 ಕೋವಿಡ್-19 ನಿರ್ಬಂಧದ ಬಳಿಕ ಚೀನಾಕ್ಕೆ ಮರಳಲು ಸಾಧ್ಯವಾಗದ ಭಾರತದ ವಿದ್ಯಾರ್ಥಿಗಳ ಬಗ್ಗೆಯೂ ಪ್ರಸ್ತಾವಿಸಿದ ಜೈಶಂಕರ್, ವಿದ್ಯಾರ್ಥಿಗಳು ಆದಷ್ಟು ಬೇಗ ಚೀನಾಕ್ಕೆ ಮರಳಿ ತಮ್ಮ ಶೈಕ್ಷಣಿಕ ಕಾರ್ಯಕ್ರಮ ಮುಂದುವರಿಸುವ ನಿಟ್ಟಿನಲ್ಲಿ ತ್ವರಿತ ಪ್ರಕ್ರಿಯೆಗೆ ಆಗ್ರಹಿಸಿದರು. ಪರಸ್ಪರ ಗೌರವ, ಪರಸ್ಪರ ಹಿತಾಸಕ್ತಿ ಮತ್ತು ಪರಸ್ಪರ ಸೂಕ್ಷ್ಮತೆ- ಈ ಮೂರು ಪರಸ್ಪರಗಳಿಗೆ ಗಮನ ನೀಡುವ ಮೂಲಕ ಭಾರತ-ಚೀನಾ ಸಂಬಂಧವು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಜೈಶಂಕರ್ ಹೇಳಿದರು. 
2020ರ ಜೂನ್ನಲ್ಲಿ ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ಮಧ್ಯೆ ಸಂಘರ್ಷ ನಡೆದಿದ್ದು ಭಾರತದ 20 ಯೋಧರು ಮೃತಪಟ್ಟಿದ್ದರು. ತನ್ನ ನಾಲ್ವರು ಯೋಧರು ಮೃತರಾಗಿರುವುದಾಗಿ ಚೀನಾ ಹೇಳಿತ್ತು. ಗಡಿಭಾಗದ ಉದ್ವಿಗ್ನತೆ ಶಮನಕ್ಕೆ ಉಭಯ ದೇಶಗಳ ನಡುವೆ ಕಮಾಂಡರ್ ಮಟ್ಟದ 15 ಸುತ್ತಿನ ಮಾತುಕತೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News