ಬಕ್ರೀದ್: ಅಡ್ಡಿಪಡಿಸುವವರ ವಿರುದ್ಧ ಕ್ರಮಕ್ಕೆ ಮನವಿ

Update: 2022-07-07 16:54 GMT

ಮಂಗಳೂರು: ಶತಮಾನಗಳಿಂದ ಮುಸ್ಲಿಮರು ಆಚರಿಸಿಕೊಂಡು ಬರುತ್ತಿರುವ ಬಕ್ರೀದ್ ಹಬ್ಬದ ಸಂಭ್ರಮಕ್ಕೆ ಅಡ್ಡಿಪಡಿಸುವವರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಮುಸ್ಲಿಂ ಜಸ್ಟೀಸ್ ಫೋರಂ ಕರ್ನಾಟಕ (ಎಂಜೆಎಫ್)ದ ನಿಯೋಗವು ದ.ಕ.ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಜಿಲ್ಲಾ ಎಸ್ಪಿಗೆ ಮನವಿ ಸಲ್ಲಿಸಿದೆ.

ಜು.೧೦ರಂದು ಬಕ್ರೀದ್ ಆಚರಿಸಲಾಗುತ್ತದೆ. ಆ ಬಳಿಕ ಮೂರು ದಿನಗಳ ಕಾಲ (ಜು.೧೩ರವರೆಗೆ) ಕೋಣ, ಎಮ್ಮೆ, ಕುರಿ, ಮೇಕೆ, ಒಂಟೆ ಮುಂತಾದ ಪ್ರಾಣಿಗಳನ್ನು ಬಲಿ ಕೊಡಲಾಗುತ್ತದೆ. ಈ ಸಂದರ್ಭ ಕೆಲವು ಸ್ಥಾಪಿತ ಹಿತಾಶಕ್ತಿಗಳು ಸಮಾಜದ ಸ್ವಾಸ್ಥ್ಯ ಕೆಡಿಸಲು ಹಬ್ಬದ ಆಚರಣೆಗೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಇದರಿಂದ ಶಾಂತಿಯುತ ಹಬ್ಬದ ಆಚರಣೆಗೆ ಅಡಚಣೆಯಾಗಬಹುದು. ಹಾಗಾಗಿ ಸ್ಥಾಪಿತ ಹಿತಾಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ತಿಳಿಸಿದೆ.

ಮುಸ್ಲಿಂ ಜಸ್ಟಿಸ್ ಫೋರಂನ ಅಧ್ಯಕ್ಷ ಇರ್ಷಾದ್ ಯುಟಿ ನಿರ್ದೇಶನದಂತೆ ಎಂಜೆಎಫ್ ಉಪಾಧ್ಯಕ್ಷ ಅಲಿ ಹಸನ್ ಮತ್ತು ಇಕ್ಬಾಲ್ ಸಾಮಣಿಗೆ, ಪ್ರಧಾನ ಕಾರ್ಯದರ್ಶಿ ವಹಾಬ್ ಕುದ್ರೋಳಿ, ಸದಸ್ಯರಾದ ಮುಸ್ತಫಾ ಪಾವೂರು, ಇದ್ದಿಕುಂಞಿ, ಆಸೀಫ್ ಬೆಂಗ್ರೆ, ಇಮ್ರಾನ್ ಎಆರ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News