×
Ad

ಕಾನೂನು ವ್ಯಾಪ್ತಿಯಲ್ಲಿ ಪ್ರಾಣಿವಧೆಗೆ ಅವಕಾಶವಿದೆ, ಅದರ ಸ್ಪಷ್ಟ ನಿಯಮಾವಳಿ ಸರ್ಕಾರ ಜನತೆಗೆ ತಿಳಿಸಬೇಕು:ಯು.ಟಿ.ಖಾದರ್

Update: 2022-07-08 17:22 IST

ಮಂಗಳೂರು : ಕಾನೂನು ವ್ಯಾಪ್ತಿಯಲ್ಲಿ ಪ್ರಾಣಿವಧೆಗೆ ಅವಕಾಶವಿದೆ, ಅದರ ಸ್ಪಷ್ಟ ನಿಯಮಾವಳಿ  ಸರ್ಕಾರ ಜನತೆಗೆ ತಿಳಿಸಬೇಕು, ಯಾರೂ ಕಾನೂನು ಮೀರಿ ನಡೆಯಬಾರದು ಎಂದು ಯು.ಟಿ. ಖಾದರ್‌ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಹೇಳಿಕೆ ನೀಡಿದರು.

ಬಕ್ರೀದ್ ಹಿನ್ನೆಲೆಯಲ್ಲಿ ಕುರ್ಬಾನಿಯಾಗಿ 14 ವರ್ಷ ಮೇಲ್ಪಟ್ಟ ಕೋಣದ ವಧೆಗೆ ಕಾನೂನಿನಲ್ಲಿ ಅವಕಾಶ ಇದೆ. ಹಾಗಾಗಿ ಈ ಬಗ್ಗೆ ಸರಕಾರ ಸ್ಪಷ್ಟನೆಯನ್ನು ನೀಡಬೇಕು. ಈ  ಬಗ್ಗೆ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದರು.

ನಂತರ ಮಾತನಾಡಿದ ಅವರು, ಪಿಎಸ್‌ಐ ಹಗರಣದ ಕುರಿತಂತೆ ಸಿಐಡಿಗೆ ಛೀಮಾರಿ ಹಾಕಿ ಅಕ್ರಮದ ತನಿಖೆಗೆ ಹೈಕೋರ್ಟ್ ಆದೇಶ ನೀಡುವುದು ಸರಕಾರದ ವೈಫಲ್ಯವಾಗಿದ್ದು, ನ್ಯಾಯಾಧೀಶರಿಗೆ ವರ್ಗಾವಣೆಯ ಬೆದರಿಕೆ ಹಾಕುವ ಪ್ರಕ್ರಿಯೆ ಗಂಭೀರ ವಿಚಾರ ಎಂದು ಶಾಸಕ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.

ಎಸ್‌ಐ ಹಗರಣದ ಕುರಿತಂತೆ ಕಾಂಗ್ರೆಸ್ ಪಕ್ಷ ಪ್ರಾಥಮಿಕ ಹಂತದಲ್ಲೇ ತನಿಖೆಗೆ ಆಗ್ರಹಿಸಿತ್ತು. ಆದರೆ ಗೃಹ ಸಚಿವರು ಹಾಗೂ ಸರಕಾರ ಎಲ್ಲಾ ನೇಮಕಾತಿ ಸರಿಯಾಗಿ ಆಗಿದೆ. ಉತ್ತೀರ್ಣರಾಗದವರು ಆರೋಪ ಮಾಡುತ್ತಿದ್ದಾರೆ ಎಂದು ಉಡಾಫೆಯಿಂದ ವರ್ತಿಸಿತ್ತು. ಇದೀಗ ಕೆಲವೇ ತಿಂಗಳಲ್ಲಿ ಹಗರಣ ಬಯಲಾಗಿದೆ. ಹೈಕೋರ್ಟ್ ನ್ಯಾಯಾಧೀಶರು ಸರಕಾರ, ಸಿಐಡಿಗೆ ಛೀಮಾರಿ ಹಾಕಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪರಿಹಾರ, ಆಕ್ಸಿಜನ್ ನೀಡಲು ಕೋರ್ಟ್ ಆದೇಶವಾಗಬೇಕು. ಇದೀಗ ಅಕ್ರಮ ತನಿಖೆಗೂ ಹೈಕೋರ್ಟ್ ಆದೇಶ ನೀಡಬೇಕೆಂದರೆ ಇದು ರಾಜ್ಯ ಸರಕಾರದ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದರು.

ಜಿಲ್ಲೆಯಿಂದ ಸಾಕಷ್ಟು ಮಂದಿ ಪಿಎಸ್‌ಐಗಳಾಗಿ ಆಯ್ಕೆಯಾಗಿದ್ದಾರೆ. ಇದೀಗ ಆ ಆಯ್ಕೆ ತಡೆಹಿಡಿಯಲ್ಪಟ್ಟಿರುವುದರಿಂದ ಅವರಿಗೂ ಆಗಿರುವ ಅನ್ಯಾಯವಾಗಿದೆ. ಈ ನಡುವೆ ನ್ಯಾಯಾಧೀಶರನ್ನೇ ವರ್ಗಾವಣೆ ಮಾಡುತ್ತಾರೆಂದರೆ ಜನತೆ ಪರಿಸ್ಥಿತಿ ಏನು ಎಂದು ಆತಂಕ ವ್ಯಕ್ತಪಡಿಸಿದ ಅವರು, ನ್ಯಾಯಾಧೀಶರ ಮೇಲಿನ ಬೆದರಿಕೆ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದರು.

ಕಡಲ್ಕೊರೆತ ಸಂಬಂಧಿಸಿ ನಿನ್ನೆ ಉಳ್ಳಾಲ ಭಾಗಕ್ಕೆ ಭೇಟಿ ನೀಡಿದ ಕಂದಾಯ ಸಚಿವರ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಹಿಂದೆಯೂ ಕಡಲು ಇತ್ತು. ಹಿಂದೆಯೂ ಕಡಲ್ಕೊರೆತ ಆಗಿದೆ. ಆದರೆ ಈ ರೀತಿಯ ಕಂದಾಯ ಸಚಿವರು ಇರಲಿಲ್ಲ ಎಂದರು.

ಕೋಟೆಪುರ ಉಳ್ಳಾಲಕೋಡಿಯಲ್ಲಿ ಹಿಂದೆಲ್ಲಾ ಭಾರೀ ಕಡಲ್ಕೊರೆತ ಸಮಸ್ಯೆ ಆಗುತ್ತಿತ್ತು. ಅದನ್ನು ಕಾಂಗ್ರೆಸ್ ಅವಧಿಯಲ್ಲಿ ಶಾಶ್ವತ ಪರಿಹಾರದ ಮೂಲಕ ಬಗೆಹರಿಸಲಾಗಿದೆ. ಇದೀಗ ಬಟ್ಟಂಪಾಡಿ, ಸೋಮೇಶ್ವರ ಮೊದಲಾದ ಪ್ರದೇಶಗಳಲ್ಲಿಯೂ ಶಾಶ್ವತ ಪರಿಹಾರದ ಜತೆಗೆ ಪ್ರತಿ ವರ್ಷ ಅದನ್ನು ನಿರ್ವಹಣೆ ಮಾಡುವ ಕಾರ್ಯವಾಗಬೇಕು. ಅದಕ್ಕೆ ಬಜೆಟ್‌ನಲ್ಲಿ ಸೂಕ್ತ ಅನುದಾನವನ್ನು ಕಾದಿರಿಸಬೇಕು. ಶಾಶ್ವತ ಪರಿಹಾರದ ಕಾಮಗಾರಿಯ ಜತೆಯಲ್ಲೇ ಅಲ್ಲಿ ಮಳೆಗಾಲದ ಸಂದರ್ಭ ತುರ್ತು ಕಾಮಗಾರಿಗಳನ್ನು ನಡೆಸಬೇಕು. ಸಮಸ್ಯೆ ಅರ್ಥ ಮಾಡಿಕೊಂಡು ಪರಿಹಾರ ನೀಡಬೇಕೇ ಹೊರತು ರಾಜಕೀಯ ಮಾತನಾಡಿದರೆ ಪರಿಹಾರವಾಗುವುದಿಲ್ಲ ಎಂದು ಖಾದರ್ ಪ್ರತಿಕ್ರಿಯಿಸಿದರು.

ಖಾಸಗಿ ಜಾಗದಲ್ಲಿ ಕಡಲ್ಕೊರೆತ ಪರಿಹಾರಕ್ಕೆ ನಾಲುಕ ಕೋಟಿ ರೂ.ಗಳನ್ನು ಒದಗಿಸಲಾಗುತ್ತದೆ. ಆದರೆ ಜನರಿರುವ ಕಡೆ ಯಾಕೆ ಪರಿಹಾರ ನೀಡುತ್ತಿಲ್ಲ. ಈ ಹಿಂದಿನ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿಯವರು ಕೂಡಾ ಕಡಲ್ಕೊರೆತ ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಅಂಗಾರ ಅವರು, ಇದೀಗ ಮತ್ತೆ ಇನ್ನೊಬ್ಬರು ಉಸ್ತುವಾರಿ ಸಚಿವರಾಗಿದ್ದಾರೆ. ಆದರೆ ಯಾವ ಪರಿಹಾರ ಕ್ರಮ ಕೈಗೊಂಡಿದ್ದಾರೆ. ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಜನಪ್ರತಿನಿಧಿಗಳು ಅಧಿಕಾರಿಗಳ ದೊಡ್ಡ ಸಭೆ ಕರೆಯಲಾಗಿತ್ತು. ಆದರೆ ಬಂದರು ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಲಿ, ಹೆದ್ದಾರಿಯ ಹಿರಿಯ ಅಧಿಕಾರಿಯಾಗಲಿ, ಡಿಎಫ್‌ಒ ಆಗಲಿ ಸಭೆಯಲ್ಲಿಲ್ಲ. ಅವರೆಲ್ಲಾ ಇಲ್ಲದೆ ಸಭೆ ಕರೆದ ಪ್ರಯೋಜನವಾದರೂ ಏನು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಶೋಕಾಸು ನೋಟೀಸು ನೀಡಿದ್ದಾರೆ. ಅದರೆ ಅಧಿಕಾರಿಗಳಿಗೆ ಸರಕಾರದ ಭಯ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಆಪಾದಿಸಿದರು.

ಸೋಮೇಶ್ವರದಲ್ಲಿ ಎಡಿಬಿ ಕಾಮಗಾರಿ ಸಮರ್ಪಕಾಗಿಲ್ಲ. ಹಾಗಾಗಿ ಇದನ್ನು ಸದ್ಯ ಬಂದರು ಇಲಾಖೆಗೆ ಹಸ್ತಾಂತರಿಸಬಾರದು. ಮೂರು ವರ್ಷ ಕಾಮಗಾರಿ ಮಾಡಿದವರೇ ನಿರ್ವಹಣೆ ಮಾಡಬೇಕೆಂದು ಕಳೆದ ವರ್ಷ ಲಿಖಿತವಾಗಿ ಮನವಿ ಮಾಡಿದ್ದೆ. ಎರಡು ವರ್ಷದ ಹಿಂದೆ ಇಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ತಾಂತ್ರಿಕ ಕಾರಣ ನೀಡಿ ಬಿಲ್ ಪಾವತಿಸಲಾಗಿಲ್ಲ. ಇದೀಗ ಯಾರೂ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಸರಕಾರಕ್ಕೆ ಗುತ್ತಿಗೆದಾರರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಲು ಬರುವುದಿಲ್ಲ. ಅಧಿಕಾರಿಗಳಿಗೆ  ಆತ್ಮವಿಶ್ವಾಸದಿಂದ ಕೆಲಸ ಮಾಡುವ ಧೈರ್ಯ ಇಲ್ಲ. ಸರಾಕರಕ್ಕೆ ಕಾಳಜಿ ಇಲ್ಲ ಎಂದು ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಸದಾಶಿವ ಉಳ್ಳಾಲ್, ರಫೀಕ್ ಅಂಬ್ಲಮೊಗರು ಉಪಸ್ಥಿತರಿದ್ದರು.

ಅಕ್ರಮ ಗೋಹತ್ಯೆ ಮಾಡಿದರೆ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಶಾಸಕ ಡಾ. ಭರತ್ ಶೆಟ್ಟಿ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಯು.ಟಿ.ಖಾದರ್, ಯಾರೂ ಕಾನೂನು ಮೀರಿ ಹೋಗಬಾರದು. ಇದೇ ವೇಳೆ ಸರಕಾರ ಕೂಡಾ ಕಾನೂನಿನ ನಿಯಮ, ಮಾರ್ಗಸೂಚಿಗಳನ್ನು ಸ್ಪಷ್ಟಪಡಿಸಬೇಕು ಎಂದರು.

ಸಿದ್ದರಾಮೋತ್ಸವ ಪಕ್ಷದ ಒಗ್ಗಟ್ಟಿನ ಸಂಕೇತ

ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಸಂಕೇತವಾಗಿ ಸಿದ್ದರಾಮೋತ್ಸವ ಆಚರಿಸಲಾಗುತ್ತಿದೆ. ಪಕ್ಷದ ನಾಯಕರಲ್ಲಿ ಈ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಸರಕಾರ ಎಲ್ಲಾ ರೀತಿಯ ಸಂಕಷ್ಟಗಳಲ್ಲಿಯೂ ಜನರ ಕಣ್ಣೊರೆಸುವ ಕೆಲಸ ಮಾಡಿದೆ. ಪ್ರತಿ ಪಕ್ಷವಾಗಿ ಈಗಲೂ ಮಾಡುತ್ತಿದೆ. ಮುಂದೆಯೂ ಮಾಡಲಿದೆ. ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೆ ಹುಟ್ಟುಹಬ್ಬದ ಸಂಭ್ರಮ ಎಂದು ಯು.ಟಿ.ಖಾದರ್ ಹೇಳಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News