'ಬಿಜೆಪಿ ಧೋರಣೆಗಳಿಂದ ಹಾಳಾದ ಶಿಕ್ಷಣ ವ್ಯವಸ್ಥೆ': ಸಚಿವ ನಾಗೇಶ್ ರಾಜೀನಾಮೆಗೆ ಎಎಪಿ ಆಗ್ರಹ

Update: 2022-07-08 12:00 GMT

ಬೆಂಗಳೂರು, ಜು.8: ಬಿಜೆಪಿ ಸರಕಾರದ ಧೋರಣೆಗಳಿಂದ ಅಂಗನವಾಡಿ, ಶಾಲೆ, ಕಾಲೇಜು ಎಂಬ ಭೇದವಿಲ್ಲದೇ ಇಡೀ ಶೈಕ್ಷಣಿಕ ವ್ಯವಸ್ಥೆಯೇ ಶೋಚನೀಯ ಸ್ಥಿತಿಯನ್ನು ತಲುಪಿದೆ. ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ಸುಮಾರು ಹತ್ತು ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗೆ ಉಳಿಯುವಂತಾಗಿದೆ. ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷವು ಆಗ್ರಹಿಸಿದೆ.

ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಪಕ್ಷದ ಉಪಾಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿ, “ರಾಜ್ಯದಲ್ಲಿ 14 ವರ್ಷದೊಳಗಿನ 10.12 ಲಕ್ಷ ಮಕ್ಕಳು ಶಾಲೆ ಮತ್ತು ಅಂಗನವಾಡಿಯಿಂದ ಹೊರಗುಳಿದಿದ್ದಾರೆ ಎಂಬ ಆತಂಕಕಾರಿ ವರದಿಯನ್ನು ವಿವಿಧ ಇಲಾಖೆಗಳು ಹೈಕೋರ್ಟ್‍ಗೆ ಸಲ್ಲಿಸಿವೆ.

ಬೆಂಗಳೂರಿನಲ್ಲಿ 534 ಮಕ್ಕಳು ಭಿಕ್ಷಾಟನೆ ಮಾಡುತ್ತಿದ್ದರೆ, 186 ಮಕ್ಕಳು ವ್ಯಾಪಾರದಲ್ಲಿ ತೊಂಡಗಿಕೊಂಡಿದ್ದಾರೆ ಒಟ್ಟು 720 ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದನ್ನು ಬಿಬಿಎಂಪಿ ಗುರುತಿಸಿದೆ. ಮಕ್ಕಳನ್ನು ಆಕರ್ಷಿಸಲು ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗುತ್ತಿದ್ದು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಈ ಬಗ್ಗೆ ಜಾಣಕುರುಡು ತೋರುತ್ತಿದ್ದಾರೆ. ನಾಗೇಶ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿ, ಸಚಿವ ಸಂಪುಟದಿಂದ ವಜಾ ಮಾಡುವಂತೆ ಮನವಿ ಮಾಡಲು ನಿರ್ಧರಿಸಿದ್ದೇವೆ” ಎಂದರು.

ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಮಾತನಾಡಿ, “ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಕೋರ್ಸ್‍ಗಳ ಪರೀಕ್ಷೆಗೆ ಕೇವಲ ಎರಡು ವಾರಗಳು ಇರುವಾಗ ಪುಸ್ತಕ ನೀಡಲಾಗಿತ್ತು. ಈ ಬಾರಿಯೂ ಅದೇ ರೀತಿಯ ಅವ್ಯವಸ್ಥೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪಠ್ಯಕ್ರಮದ ಪಿಡಿಎಫ್ ನೀಡದೇ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಗೊಂದಲದಲ್ಲಿ ಸಿಲುಕಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಗೋಷ್ಠಿಯಲ್ಲಿ ಎಎಪಿಯ ಬೆಂಗಳೂರು ಮಹಿಳಾ ಘಟಕದ ಉಷಾ ಮೋಹನ್, ಮರಿಯ, ಸುಹಾಸಿನಿ ಫಣಿರಾಜ್, ಸುಮನ್ ಪ್ರಶಾಂತ ಇನ್ನಿತರರು ಭಾಗವಹಿಸಿದ್ದರು.


ಮೂಲಸೌಕರ್ಯಗಳ ನಿರ್ಲಕ್ಷ್ಯ

ಹಿಜಾಬ್-ಕೇಸರಿಶಾಲು ವಿವಾದ, ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮುಂತಾದುವುಗಳಲ್ಲೇ ಶಿಕ್ಷಣ ಸಚಿವರು ಕಾಲಹರಣ ಮಾಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೀಡಲಾಗುತ್ತಿದ್ದ ಸೈಕಲ್, ಶೂ, ಸಾಕ್ಸ್ ಮುಂತಾದವುಗಳನ್ನು ಈ ಬಾರಿ ನೀಡದಿರಲು ಬಿಜೆಪಿ ಸರಕಾರ ನಿರ್ಧರಿಸಿರುವುದು ಖಂಡನೀಯ. ಬಹುತೇಕ ಸರಕಾರಿ ಶಾಲೆಗಳ ಕಟ್ಟಡಗಳು ದುಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳು ಆತಂಕದಿಂದ ತರಗತಿಗಳಲ್ಲಿ ಕೂರಬೇಕಾಗಿದೆ. ಶಾಲೆಗಳಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ ಮುಂತಾದ ಮೂಲಸೌಕರ್ಯಗಳು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಮಕ್ಕಳನ್ನು ಶಿಕ್ಷಣದತ್ತ ಸೆಳೆಯಲು ರೂಪಿಸಿದ್ದ ವಿದ್ಯಾಸಿರಿ, ಕ್ಷೀರಭಾಗ್ಯ, ಬಿಸಿಯೂಟ ಮುಂತಾದ ಯೋಜನೆಗಳನ್ನೂ ಸರಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ. ಹಾಗಾಗಿ ಮಕ್ಕಳು ಶಾಲೆಗಳಿಂದ ಹೊರಗೆ ಉಳಿಯುತ್ತಿದ್ದಾರೆ.

-ಭಾಸ್ಕರ್ ರಾವ್, ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News