ಬೆಂಗಳೂರು: ಚಿನ್ನಾಭರಣ ದರೋಡೆಗೈದ ಆರೋಪಿಗಳ ಬಂಧನ
ಬೆಂಗಳೂರು, ಜು.8: ನಗರದ ಮೈಲಸಂದ್ರದ ರಾಮ್‍ದೇವ್ ಜ್ಯುವೆಲ್ಲರಿ ಮಳಿಗೆಯಿಂದ ಸುಮಾರು 1 ಕೋಟಿ 58 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದ ಪ್ರಕರಣವನ್ನು ಕೇವಲ 72 ಗಂಟೆಗಳಲ್ಲಿ ಭೇದಿಸುವಲ್ಲಿ ಆಗ್ನೇಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿನ್ನಾಭರಣ ಲೂಟಿ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರ ತಂಡವನ್ನು ರಾಜಸ್ಥಾನದಲ್ಲಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ ಮತ್ತೊಬ್ಬನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇವಾರಾಮ್, ರಾಹುಲ್ ಸೋಲಂಕಿ ಅನಿಲ್, ರಾಮ್ ಸಿಂಗ್ ಬಂಧಿತ ಆರೋಪಿಗಳಾಗಿದ್ದು, ಅವರಿಂದ ಲೂಟಿ ಮಾಡಿದ್ದ ಚಿನ್ನಾಭರಣಗಳು, ಎರಡು ಪಿಸ್ತೂಲ್, ಮೂರು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಕಳೆದ ಜೂ. 4 ರಂದು ಎಲೆಕ್ಟ್ರಾನಿಕ್ ಸಿಟಿಯ ಮೈಲಸಂದ್ರದ ರಾಮದೇವ್ ಜ್ಯುವೆಲರ್ಸ್‍ಗೆ ಗ್ರಾಹಕರ ಸೋಗಿನಲ್ಲಿ ನುಗ್ಗಿದ ನಾಲ್ವರು ದುಷ್ಜರ್ಮಿಗಳು ಪಿಸ್ತೂಲ್ ತೋರಿಸಿ 3 ಕೆಜಿ 900 ಗ್ರಾಂ ಚಿನ್ನ, 13 ಕೆಜಿ 640 ಗ್ರಾಂ ಬೆಳ್ಳಿ ಆಭರಣ ದೋಚಿದ್ದರು.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಓರ್ವ ಆರೋಪಿಯನ್ನು ಹಿಂಬಾಲಿಸಿದ್ದು, ಆತನ ಮೂಲಕ ಎಲ್ಲಾ ಆರೋಪಿಗಳು ಇರುವ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಆರೋಪಿಗಳು ಉದಯಪುರದಲ್ಲಿದ್ದು, ಕರ್ನಾಟಕ ಪೊಲೀಸರು ಉದಯಪುರ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು.
ಉದಯಪುರ ಪೊಲೀಸರ ನೆರವಿನೊಂದಿಗೆ ಸುಮಾರು 3 ಕಿ.ಮೀ.ವರೆಗೆ ಖದೀಮರನ್ನು ಬೆನ್ನತ್ತಿ, ಅವರು ಪೊಲೀಸರ ಮೇಲೆ ಗುಂಡು ಹಾರಿಸಿ, ಪೊಲೀಸರೂ ಸಹ ತಕ್ಕ ಪ್ರತಿಕ್ರಿಯೆ ನೀಡಿ, ಕೊನೆಗೆ ಓಡಲಾರಂಭಿಸಿದಾಗ ಸ್ಥಳೀಯರ ಸಹಾಯದಿಂದ ನಾಲ್ವರು ಆರೋಪಿಗಳನ್ನು ಹಿಡಿದರು. ಇವರ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.