ಚಾಮರಾಜಪೇಟೆ ಈದ್ಗಾ ಮೈದಾನದ ಬಗ್ಗೆ ಅನಗತ್ಯ ಗೊಂದಲ ಬೇಡ: ಝಮೀರ್ ಅಹ್ಮದ್
ಬೆಂಗಳೂರು, ಜು.8: ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ರಾಜಕೀಯ ದುರುದ್ದೇಶದಿಂದ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ನನ್ನ ಪ್ರಾಣ ಇರುವವರೆಗೂ ಈದ್ಗಾ ಮೈದಾನಕ್ಕೆ ಏನೂ ಆಗಲು ಬಿಡುವುದಿಲ್ಲ. ಈಗಿರುವಂತೆಯೆ ಅದು ಆಟದ ಮೈದಾನವಾಗಿಯೂ ಬಳಕೆಯಾಗುತ್ತಿರುತ್ತದೆ ಎಂದು ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಹೇಳಿದರು.
ಶುಕ್ರವಾರ ಚಾಮರಾಜಪೇಟೆಯ ವೆಂಕಟರಾಮ್ ಕಲಾಭವನದಲ್ಲಿ ನಡೆದ ಸೌಹಾರ್ದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಟದ ಮೈದಾನ ಉಳಿಸಿ ಎಂದು ಕೆಲವರು ಜು.12ರಂದು ಚಾಮರಾಜಪೇಟೆ ಬಂದ್ ಮಾಡುವಂತೆ ಕರೆ ನೀಡಿದ್ದಾರೆ. ಆದರೆ, ಆಟದ ಮೈದಾನ ಎಲ್ಲಿ ಹೋಗಿದೆ ಎಂದರು.
1871 ರಿಂದಲೂ ಇದು ಈದ್ಗಾ ಮೈದಾನವಾಗಿದೆ. 1907ರಲ್ಲಿ ರಚನೆಯಾದ ಸೆಂಟ್ರಲ್ ಮುಸ್ಲಿಮ್ ಅಸೋಸಿಯೇಷನ್(ಸಿಎಂಎ) ಅವರ ಅಧೀನದಲ್ಲಿದ್ದ ಈ ಜಾಗವನ್ನು 1965ರಲ್ಲಿ ರಾಜ್ಯ ವಕ್ಫ್ ಮಂಡಳಿ ರಚನೆಯಾದ ಬಳಿಕ ಸಿಎಂಎ ಅವರು ಈ ಜಾಗವನ್ನು ವಕ್ಫ್ ಮಂಡಳಿಯಲ್ಲಿ ನೋಂದಣಿ ಮಾಡಿಸಿದ್ದಾರೆ. ಅಲ್ಲದೆ, ಅದೇ ವರ್ಷ ಗೆಜೆಟ್ ಅಧಿಸೂಚನೆಯಲ್ಲಿಯೂ ಇದನ್ನು ಪ್ರಕಟಿಸಲಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಮುಖ್ಯಮಂತ್ರಿ, ಶಾಸಕ, ಬಿಬಿಎಂಪಿ ಅಥವಾ ವಕ್ಫ್ ಬೋರ್ಡ್‍ನವರು ಯಾರಾದರೂ ಈ ಮೈದಾನದಲ್ಲಿ ಆಟವಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆಯೇ? ಯಾರೊಬ್ಬರೂ ಹೇಳಿಕೆಯನ್ನು ನೀಡಿಲ್ಲ. ಆದರೂ, ಯಾಕಿಷ್ಟು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಚಾಮರಾಜಪೇಟೆ ಕ್ಷೇತ್ರದ ಜನ ನನ್ನನ್ನು ತಮ್ಮ ಮನೆ ಮಗನಂತೆ ಭಾವಿಸಿದ್ದಾರೆ. ಅವರ ಪ್ರೀತಿ, ವಿಶ್ವಾಸವನ್ನು ಗಳಿಸಿರುವ ಕಾರಣಕ್ಕಾಗಿಯೇ ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ನಾನು ಯಾವುತ್ತೂ ಜಾತಿ, ಧರ್ಮದ ಆಧಾರದಲ್ಲಿ ಭೇದಭಾವ ಮಾಡಿಲ್ಲ. ನನಗೆ ಗೊತ್ತಿರುವುದು ಎರಡೇ ಜಾತಿ ಒಂದು ಗಂಡು ಮತ್ತೊಂದು ಹೆಣ್ಣು ಮಾತ್ರ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ 580ಕ್ಕೂ ಹೆಚ್ಚು ಶವಗಳ ಅಂತ್ಯಸಂಸ್ಕಾರ ಮಾಡಿಸಿದ್ದೇನೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎಂದು ನೋಡಿಲ್ಲ. ಈಗ ನನ್ನನ್ನು ವಿರೋಧ ಮಾಡುತ್ತಿರುವವರು ಕೋವಿಡ್ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು. ಸಂಸದ ಪಿ.ಸಿ.ಮೋಹನ್ ಎಲ್ಲಿ ಹೋಗಿದ್ದರು? ಎಂದು ಪ್ರಶ್ನಿಸಿದ ಅವರು, ಇವತ್ತಿನ ಸಭೆಯಲ್ಲಿ ಚಾಮರಾಜಪೇಟೆಯ ಎಲ್ಲ ಮುಖಂಡರು ಇದ್ದಾರೆ. ಆದರೆ, ಬಿಜೆಪಿಯ ಮಾಜಿ ಪಾಲಿಕೆ ಸದಸ್ಯರಿಗೆ ಆಹ್ವಾನ ನೀಡಿದರೂ ಬಂದಿಲ್ಲ ಎಂದರು.
ಇದೇ ವರ್ಷದಿಂದ ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಾನೇ ತ್ರಿವರ್ಣ ಧ್ವಜ ಹಾರಿಸುತ್ತೇನೆ. ನಾನು ನಿಮ್ಮ ಸೇವಕ, ನೀವು ಹೇಳಿದ ಕೆಲಸ ಮಾಡೋದು ನನ್ನ ಕರ್ತವ್ಯ. ರಾಜಕೀಯಕ್ಕಾಗಿ ಗೊಂದಲ ಸೃಷ್ಟಿ ಮಾಡುತ್ತಿರುವವರು ಯಾರೂ ಅನ್ನೋದು ನನಗೆ ಗೊತ್ತಿದೆ. ಅವರಿಗೆ ಚಾಮರಾಜಪೇಟೆ ಕ್ಷೇತ್ರದ ಮತದಾರರೇ ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತಾರೆ ಎಂದು ಅವರು ತಿಳಿಸಿದರು.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮೈದಾನದಲ್ಲಿ ನಡೆಯುವ ಕುರಿ ಮಾರಾಟದಿಂದಾಗಿ ಸುತ್ತಮುತ್ತಲಿನ ಮನೆಗಳಿಗೆ ವಾಸನೆ ಬರುತ್ತಿದೆ. ಅಲ್ಲದೆ, ಮಕ್ಕಳು ಆಟವಾಡಲು ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. ಸ್ಥಳೀಯರ ಅಭಿಪ್ರಾಯದಂತೆ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಸಭೆಯಲ್ಲಿ ಬಿಬಿಎಂಪಿ ಮಾಜಿ ಸದಸ್ಯರು, ಧಾರ್ಮಿಕ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.