‘ಬಿಜೆಪಿ ಆಡಳಿತದಿಂದ ಜನರ ಜೀವನ ಹಾಳು': ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಮಾಲೋಚನೆ

Update: 2022-07-08 17:17 GMT

ಬೆಂಗಳೂರು, ಜು. 8: ‘ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಖುದ್ದು ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಸಿದ್ದರಾಮಯ್ಯ ಅವರೊಂದಿಗೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.

ಶುಕ್ರವಾರ ಇಲ್ಲಿನ ಶಿವಾನಂದ ವೃತ್ತದ ಬಳಿಯ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ‘ನಿನ್ನೆ ಪಕ್ಷದ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಜತೆ ಚರ್ಚೆ ಮಾಡಿದ್ದು, ಜುಲೈ 18ರಂದು ಎಲ್ಲ ಶಾಸಕರ ಜತೆ ಸಭೆ ಮಾಡುತ್ತೇವೆ. ಎಐಸಿಸಿ ಕಾರ್ಯಕ್ರಮಗಳು ಹಾಗೂ ಪಕ್ಷದ ಸಂಘಟನೆ ವಿಚಾರವಾಗಿ ಪಕ್ಷದ ಪದಾಧಿಕಾರಿಗಳು, ಸಂಸದರಿಗೆ ಜವಾಬ್ದಾರಿ ವಹಿಸಿದ್ದು, ಅವರ ಜವಾಬ್ದಾರಿಯ ಕುರಿತು ಮಾರ್ಗದರ್ಶನ ನೀಡಿದ್ದೇವೆ' ಎಂದರು.

‘ಪಕ್ಷ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಬಗ್ಗೆ ಸ್ಥಳೀಯ ನಾಯಕರು ಕೆಲವು ಶಿಫಾರಸ್ಸುಗಳನ್ನು ಮಾಡಿದ್ದಾರೆ. ಪಕ್ಷ ಯಾವ ರೀತಿ ಸಾಗಬೇಕು ಎಂಬುದು ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಸಿದ್ದರಾಮಯ್ಯ ಅವರು ನನ್ನನ್ನು ಉಪಾಹಾರಕ್ಕೆ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಬಂದು ಮುಂದಿನ ದಿನಗಳಲ್ಲಿ ಪಕ್ಷವನ್ನು ಯಾವ ರೀತಿ ಮುಂದೆ ತೆಗೆದುಕೊಂಡು ಹೋಗಬೇಕು, ಬಿಜೆಪಿ ಭ್ರಷ್ಟ ಆಡಳಿತದ ವಿರುದ್ಧ ಹೇಗೆ ಹೋರಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ' ಎಂದು ಶಿವಕುಮಾರ್ ವಿವರಿಸಿದರು.

‘ಬಿಜೆಪಿ ಸರಕಾರ ರಾಜ್ಯದಲ್ಲಿ ಆಧಿಕಾರಕ್ಕೆ ಬಂದ ನಂತರ ಜೀವನವೇ ಹಾಳಾಗಿದೆ ಎಂದು ಜನರು ನೊಂದಿದ್ದಾರೆ. ಯುವಕರು, ಮಹಿಳೆಯರ ಪರಿಸ್ಥಿತಿ ಹಾಳಾಗಿದೆ. ರೈತರ ಪರಿಸ್ಥಿತಿ ಹೀನಾಯವಾಗಿದೆ. ಜನರ ಆಕ್ರೋಶ ಹೆಚ್ಚಾಗಿದ್ದು, ಜನರ ಭಾವನೆ ಸ್ಪಂದಿಸಿ ಕೆಲಸ ಮಾಡುವುದೇ ಕಾಂಗ್ರೆಸ್ ಮೂಲ ಧ್ಯೇಯವಾಗಿದೆ. ಈ ಬಗ್ಗೆ ಚರ್ಚೆ ಮಾಡಿದ್ದೇವೆ' ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

‘ಸಿದ್ದರಾಮಯ್ಯ ಅವರ ಹಿತೈಷಿಗಳು ಆಗಸ್ಟ್ ತಿಂಗಳಲ್ಲಿ ಅವರ ಹುಟ್ಟುಹಬ್ಬ ಆಚರಣೆಗೆ ಮುಂದಾಗಿದ್ದು, ಅವರ ಆಡಳಿತದಲ್ಲಿ ಜನರಿಗೆ ಕೊಟ್ಟ ಯೋಜನೆಗಳ ಬಗ್ಗೆ ವ್ಯಾಪಕವಾಗಿ ತಿಳಿಸುವುದು ಎಲ್ಲರ ಆಶಯವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳು ಕಳೆದಿದ್ದು, ಈ ನಿಟ್ಟಿನಲ್ಲಿ ಪಕ್ಷಾತೀತ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸೋನಿಯಾ ಗಾಂಧಿ ಅವರು ಮಾರ್ಗದರ್ಶನ ನೀಡಿದ್ದು, ಈ ಕಾರ್ಯಕ್ರಮ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆಯೂ ಚರ್ಚೆ ಮಾಡಿದ್ದೇವೆ’ ಎಂದು ಅವರು ತಿಳಿಸಿದರು.

ಪಕ್ಷದ ಕಾರ್ಯಕ್ರಮ: ‘ಸಿದ್ದರಾಮಯ್ಯ 75ನೆ ಅಮೃತ ಮಹೋತ್ಸವ ಕಾರ್ಯಕ್ರಮದ ಆಯೋಜನಾ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದವರೇ ಇದ್ದಾರೆ. ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಈ ಸಮಿತಿ ಗೌರವಾಧ್ಯಕ್ಷರು, ಕೆ.ಎನ್.ರಾಜಣ್ಣ ಅಧ್ಯಕ್ಷರು, ಬಸವರಾಜ ರಾಯರೆಡ್ಡಿ, ಡಾ.ಮಹದೇವಪ್ಪ, ಶ್ಯಾಮನೂರು ಶಿವಶಂಕರಪ್ಪ ಅವರು ಈ ಸಮಿತಿಯಲ್ಲಿದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್, ಎಂ.ಬಿ.ಪಾಟೀಲ್ ಹಾಗೂ ನನಗೂ ಆಹ್ವಾನ ನೀಡಿದ್ದು, ಪಕ್ಷದವರೇ ಇರುತ್ತಾರೆ’ ಎಂದು ಶಿವಕುಮಾರ್ ಉತ್ತರಿಸಿದರು.

‘ಸಿದ್ದರಾಮಯ್ಯರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಇದು ಮಾಧ್ಯಮಗಳ ಸೃಷ್ಟಿ. ಈ ಕಾರ್ಯಕ್ರಮಕ್ಕೆ ಸಿದ್ದರಾಮೋತ್ಸವ ಎಂಬ ಹೆಸರನ್ನು ಮಾಧ್ಯಮಗಳೇ ಇಟ್ಟಿವೆ. ಇದು ಕೇವಲ ಸಿದ್ದರಾಮಯ್ಯರ 75ನೆ ವರ್ಷದ ಹುಟ್ಟುಹಬ್ಬದ ಆಚರಣೆಯೇ ಹೊರತು, ಯಾರ ಉತ್ಸವವೂ ಅಲ್ಲ. ಬೇರೆ ಯಾವುದೇ ಪಕ್ಷದ ನಾಯಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಸಿದ್ದರಾಮಯ್ಯ ಅಮತ ಮಹೋತ್ಸವ ಕಾರ್ಯಕ್ರಮದ ಹಿಂದೆ ಸಹಜವಾಗಿ ರಾಜಕೀಯ ಉದ್ದೇಶಗಳು ಇದ್ದೇ ಇರುತ್ತವೆ. ನಾವು ಸನ್ಯಾಸಿಗಳಲ್ಲ. ನಮ್ಮ ಐದು ವರ್ಷದ ಸಾಧನೆಗಳನ್ನು ಹೇಳಿದರೆ ಅದು ರಾಜಕೀಯ ಆಗುವುದಿಲ್ಲವೇ? ರಾಜಕೀಯ ಪಯಣವನ್ನು ನೆನಪಿಸಿಕೊಂಡರೆ ಅದು ರಾಜಕೀಯವೇ ಆಗುತ್ತದೆ’ ಎಂದು ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News