ಮಂಗಳೂರು: ಸಾನಿಧ್ಯ ಕ್ರೀಡಾಪಟುಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಮಂಗಳೂರು: ಶಕ್ತಿನಗರದಲ್ಲಿರುವ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯ 4 ಮಂದಿ ವಿಶೇಷ ವಿದ್ಯಾರ್ಥಿಗಳು ರಾಜ್ಯ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗುಜರಾತಿನ ಗಾಂಧೀನಗರದಲ್ಲಿ ನಡೆಯಲಿರುವ ಸ್ಪೆಷಲ್ ಒಲಿಂಪಿಕ್ಸ್‌ನ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಹರೀಶ್ ವಿ. ಭಾಗವಹಿಸಲಿದ್ದಾರೆ. ಇವರು ಮಂಗಳಾ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ತರಬೇತುದಾರ ಪ್ರೇಮನಾಥ ಉಳ್ಳಾಲ್, ತರಬೇತಿದಾರರಾದ ಸರಸ್ವತಿ ಪುತ್ರನ್ ಹಾಗೂ ಫಿಟನೆಸ್ ತರಬೇತಿದಾರ ವಿಶಾಲ್ ಶೆಟ್ಟಿ ಕಳೆದ ೨ ವರ್ಷಗಳಿಂದ ತರಬೇತಿ ನೀಡುತ್ತಿದ್ದಾರೆ.
ಇತ್ತೀಚೆಗೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ ರಾಜ್ಯ ಮಟ್ಟದ ವಿಶೇಷ ಒಲಿಂಪಿಕ್ಸ್ ರೋಲರ್ ಸ್ಕೇಟಿಂಗ್‌ಚಾಂಪಿನ್‌ಶಿಪ್‌ನಲ್ಲಿ ಭಾಗವಹಿಸಿದ ಸಾನ್ನಿದ್ಯದ ಮೂರು ಮಂದಿ ವಿಶೇಷ ಮಕ್ಕಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಇವರೂ ಗುಜರಾತ್‌ನಲ್ಲಿ ನಡೆಯಲಿರುವ ಸ್ಪೆಷಲ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ.
ದ.ಕ. ಜಿಲ್ಲೆಯ ಕಡಬ ತಾಲೂಕಿನ ಇಸ್ಮಾಯಿಲ್ ಫಾಝಿಲ್, ಮಂಗಳೂರಿನ ಅದ್ಯಪಾಡಿಯ ಗೌತಮ್ ಪಿ. ಹಾಗೂ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿನ ಮಹೇಶ್ ನಾಯಕ್ ಅವರಿಗೆ ಶಾಲಾ ಕ್ರೀಡಾ ಶಿಕ್ಷಕಿ ದಿವ್ಯಾ ಜೆ. ಸೇಮಿತ ನಿರಂತರ ತರಬೇತಿ ನೀಡಿದ್ದಾರೆ. ಈ ವಿದ್ಯಾರ್ಥಿಗಳು ಸಾಮಾಜಿಕ ಜಾಗೃತಿ ಮೂಡಿಸುವ ಮೆರವಣಿಗೆಗಳಲ್ಲಿಯೂ ರಸ್ತೆಯಲ್ಲಿ ಸ್ಕೇಟಿಂಗ್ ಮಾಡಿ ಚಲಿಸಿದ ಅನುಭವ ಹೊಂದಿದ್ದಾರೆ.
ಈ ತಂಡ ಜುಲೈ ೧೦ರಂದು ಬೆಂಗಳೂರಿಗೆ ಪ್ರಯಾಣಿಸಿ ೧೧ರಂದು ಗುಜರಾತ್ ತಲುಪಲಿದ್ದಾರೆ. ಜುಲೈ ೧೨ರಿಂದ ೧೫ರವರೆಗೆ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಜು. ೧೬ರಂದು ಬೆಂಗಳೂರಿಗೆ ಆಗಮಿಸಿ ೧೭ರಂದು ಮಂಗಳೂರು ತಲುಪಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.