ರೇಝರ್‌ಪೇ ಆಲ್ಟ್‌ ನ್ಯೂಸ್‌ ಗೆ ದೇಣಿಗೆ ನೀಡಿದವರ ಮಾಹಿತಿಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಬೇಕಿತ್ತೇ?

Update: 2022-07-09 17:50 GMT
Razorpay Logo

ತಾನು ದೇಣಿಗೆಗಳನ್ನು ಸ್ವೀಕರಿಸಲು ಬಳಸಿದ್ದ ಪೇಮೆಂಟ್ ಗೇಟ್ವೇ ‘ರೇಝರ್‌ಪೇ’ ತನ್ನ ಕೆಲವು ದಾನಿಗಳ ಮಾಹಿತಿಗಳನ್ನು ಪೊಲೀಸರಿಗೆ ಒದಗಿಸಿದೆ ಎಂದು ಸತ್ಯಶೋಧಕ ಜಾಲತಾಣ ಆಲ್ಟ್ ನ್ಯೂಸ್ ಹೇಳಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶವನ್ನು ಸೃಷ್ಟಿಸಿದ್ದು,ಹಲವಾರು ಬಳಕೆದಾರರು ರೇಝರ್‌ಪೇ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿ ಅದು ಗೋಪ್ಯತೆಯನ್ನು ಉಲ್ಲಂಘಿಸಿದೆ ಎಂದು ಟೀಕಿಸಿದ್ದಾರೆ.

ಸಿಪಿಸಿಯ ಕಲಂ 91ರಡಿ ತಾನು ಸಮನ್ಸ್ ಸ್ವೀಕರಿಸಿದ್ದರಿಂದ ಅದನ್ನು ಪಾಲಿಸುವ ಅಗತ್ಯವಿತ್ತು ಎಂಬ ರೇಝರ್‌ಪೇ ಹೇಳಿಕೆಯನ್ನು ಕೆಲವರು ಅನುಮೋದಿಸಿದ್ದರೆ,ಕಂಪನಿಯ ಕ್ರಮವು ಸರಕಾರದ ಕಣ್ಗಾವಲನ್ನು ಸಕ್ರಿಯಗೊಳಿಸಿದೆ,ಬದಲಿಗೆ ಅದು ಆ್ಯಪಲ್ ಮತ್ತು ಟ್ವಿಟರ್ನಂತಹ ತಂತ್ರಜ್ಞಾನ ದೈತ್ಯರ ಇಂತಹುದೇ ನಿದರ್ಶನಗಳನ್ನು ಉಲ್ಲೇಖಿಸಿ ಪೊಲೀಸರ ವಿನಂತಿಯನ್ನು ವಿರೋಧಿಸಬೇಕಿತ್ತು ಎಂದು ಹಲವರು ಪ್ರತಿಪಾದಿಸಿದ್ದಾರೆ. ತಾವು ಪಡೆದುಕೊಂಡಿದ್ದ ಕಾನೂನು ಸಲಹೆಯಂತೆ ಕಂಪನಿಯು ಸರಕಾರವು ಕೇಳಿದ್ದ ಮಾಹಿತಿಗಳನ್ನು ಒದಗಿಸಲೇಬೇಕಿತ್ತು ಎಂದು ರೇಝರ್‌ಪೇ ಸಿಇಒ ಮತ್ತು ಸಹಸ್ಥಾಪಕ ಹರ್ಷಿಲ್ ಮಾಥುರ್ ಅವರು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 
ರೇಝರ್‌ಪೇದ ಕ್ರಮಗಳ ಬಗ್ಗೆ ತಜ್ಞರು ಏನು ಹೇಳುತ್ತಾರೆ ಮತ್ತು ಗೋಪ್ಯತೆ ಕಾನೂನು ಹಾಗೂ ಮಾಹಿತಿ ರಕ್ಷಣೆ ಕಾನೂನುಗಳ ಅನುಪಸ್ಥಿತಿಯಲ್ಲಿ ಭಾರತದಲ್ಲಿನ ತಂತ್ರಜ್ಞಾನ ಕಂಪೆನಿಗಳಿಂದ ಬಳಕೆದಾರರು ಏನನ್ನು ನಿರೀಕ್ಷಿಸಬಹುದು ಎನ್ನುವುದು ಇಲ್ಲಿದೆ.
 
ಪತ್ರಕರ್ತ ಮತ್ತು ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೈರ್ ಗೆ ಸಂಬಂಧಿಸಿದ ಪ್ರಕರಣದ ತನಿಖೆಯ ಅಂಗವಾಗಿ ರೇಝರ್‌ಪೇಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. 2018ರಲ್ಲಿ ಮಾಡಿದ್ದ ಟ್ವೀಟ್ ಗಾಗಿ ಝುಬೈರ್ ರನ್ನು ಬಂಧಿಸಲಾಗಿದ್ದು,ನಂತರ ಅವರ ವಿರುದ್ಧ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್ಸಿಆರ್ಎ)ಯ ಉಲ್ಲಂಘನೆಗಳ ಆರೋಪಗಳನ್ನು ಹೊರಿಸಲಾಗಿದೆ. 

ಸಮನ್ಸ್ ಅನ್ನು ದಿಲ್ಲಿ ಪೊಲೀಸರು ಜಾರಿಗೊಳಿಸಿದ್ದರೇ ಅಥವಾ ಜಾರಿ ನಿರ್ದೇಶನಾಲಯವೇ ಎನ್ನುವುದು ಹಾಗೂ ರೇಝರ್‌ಪೇ ಒದಗಿಸಿದ್ದ ಮಾಹಿತಿಗಳ ಸ್ವರೂಪ ಸ್ಪಷ್ಟವಾಗಿಲ್ಲ. ರೇಝರ್‌ಪೇ ಆಲ್ಟ್ ನ್ಯೂಸ್ ನ ಖಾತೆಯನ್ನು ಅಲ್ಪಾವಧಿಗೆ ಸ್ಥಗಿತಗೊಳಿಸಿದ್ದು ಏಕೆ ಎನ್ನುವುದೂ ಅಸ್ಪಷ್ಟವಾಗಿದೆ. ಕಳೆದೆರಡು ತಿಂಗಳುಗಳಲ್ಲಿಯ ವಹಿವಾಟುಗಳ ಮೂಲ ಮತ್ತು ಗಮ್ಯಸ್ಥಾನಗಳ ಕುರಿತು ಮಾಹಿತಿಗಳನ್ನು ಕೇಳಲಾಗಿತ್ತು ಮತ್ತು ಬ್ಯಾಂಕ್ ಖಾತೆಗಳು,ಪಾನ್ ಮತ್ತು ವಿಳಾಸಗಳಂತಹ ದಾನಿಗಳ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಗಳನ್ನು ಕೋರಲಾಗಿರಲಿಲ್ಲ ಎಂದು ‘ಮನಿಕಂಟ್ರೋಲ್’ ವರದಿ ಮಾಡಿದೆ. ಪಾನ್ ಸಂಖ್ಯೆಗಳು ಮತ್ತು ಪಿನ್ ಕೋಡ್ಗಳನ್ನು ತಾನು ಸರಕಾರಕ್ಕೆ ಒದಗಿಸಿಲ್ಲ ಎಂದು ರೇಝರ್‌ಪೇ ಕೂಡ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಆ್ಯಪಲ್ ಅಥವಾ ಟ್ವಿಟರ್ ನಂತಹ ಸಂಸ್ಥೆಗಳೊಂದಿಗೆ ಹೋಲಿಕೆಗಳು ರೇಝರ್‌ಪೇದ ಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನೆರವಾಗುವುದಿಲ್ಲ. ಭಾರತದಲ್ಲಿನ ಮತ್ತು ಅಮೆರಿಕದಲ್ಲಿನ ಕಾನೂನು ವ್ಯವಸ್ಥೆಗಳು ಭಿನ್ನವಾಗಿರುವುದು ಮಾತ್ರವಲ್ಲ, ಅಮೆರಿಕದಲ್ಲಿಯೂ ಆ್ಯಪಲ್ನಂತಹ ಕಂಪನಿಗಳು ಸಾಂದರ್ಭಿಕವಾಗಿ,ತಮ್ಮಲ್ಲಿ ಸ್ಟೋರ್ ಆಗಿರುವ ಬಳಕೆದಾರ ಮಾಹಿತಿಗಾಗಿ ಕಾನೂನು ಜಾರಿ ಸಂಸ್ಥೆಗಳ ಕೋರಿಕೆಗಳೊಂದಿಗೆ ಸಹಕರಿಸುತ್ತವೆ ಎನ್ನುತ್ತಾರೆ ಸೆಂಟರ್ ಫಾರ್ ಇಂಟರ್ನೆಟ್ ಆ್ಯಂಡ್ ಸೊಸೈಟಿಯ ಸಹಸ್ಥಾಪಕ ಪ್ರಾಣೇಶ್ ಪ್ರಕಾಶ್.

ಸರಕಾರದ ಸಂಭಾವ್ಯ ಒತ್ತಡದ ಮತ್ತು ತನ್ನ ವ್ಯವಹಾರವು ಪ್ರತಿಕೂಲ ಪರಿಣಾಮಗಳಿಗೆ ತುತ್ತಾಗುವ ಆತಂಕದಿಂದ ಮತ್ತು ಆರ್ಬಿಐ ಪರವಾನಿಗೆಯನ್ನು ಕಳೆದುಕೊಳ್ಳುವ ಭೀತಿಯಿಂದ ನಿಜಕ್ಕೂ ರೇಝರ್‌ಪೇ ಸಮನ್ಸ್ ಪಾಲಿಸದಿರುವ ಅಪಾಯವನ್ನು ಎದುರುಹಾಕಿಕೊಳ್ಳುವುದು ಸಾಧ್ಯವಿರಲಿಲ್ಲ ಎನ್ನುತ್ತಾರೆ ಸ್ವತಂತ್ರ ಗೋಪ್ಯತೆ ಸಂಶೋಧಕ ಶ್ರೀನಿವಾಸ್ ಕೊಡಾಲಿ. ರೇಝರ್‌ಪೇದ ಗೋಪ್ಯತಾ ನೀತಿಯಲ್ಲಿ ಸ್ಪಷ್ಟಪಡಿಸಿರುವ ಅಂಶಗಳನ್ನು ಪರಿಗಣಿಸಿದರೆ ಅದು ಪೊಲೀಸ್ ಸಮನ್ಸ್ ಅನ್ನು ತಿರಸ್ಕರಿಸಬೇಕು ಎಂದು ನಿರೀಕ್ಷಿಸುವುದು ಅವಾಸ್ತವಿಕವಾಗುತ್ತದೆ ಎಂದೂ ಅವರು ಅಭಿಪ್ರಾಯಿಸಿದ್ದಾರೆ.
 ‌
ರೇಝರ್‌ಪೇ ತನಗೆ ತಿಳಿಸದೆ ದಾನಿಗಳ ಮಾಹಿತಿಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿದೆ ಎಂದು ಆಲ್ಟ್ ನ್ಯೂಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಂಪನಿಯು ತನ್ನ ಬಳಕೆದಾರರಿಗೆ ಮಾಹಿತಿ ನೀಡುವುದರಿಂದ ಅವರು ಬಯಸಿದರೆ ಅಧಿಕಾರಿಗಳ ಕೋರಿಕೆಯನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸುವ ಕನಿಷ್ಠ ಅವಕಾಶವನ್ನಾದರೂ ಒದಗಿಸುತ್ತದೆ ಎಂದು ಪ್ರಾಣೇಶ್ ಬೆಟ್ಟು ಮಾಡಿದ್ದಾರೆ. ‘ನಾವು ಆಲ್ಟ್ ನ್ಯೂಸ್‌ಗೆ ಮಾಹಿತಿಯನ್ನು ನೀಡಲು ಅದರ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆವು,ಆದರೆ ಅದು ಸಾಧ್ಯವಾಗಿರಲಿಲ್ಲ’ ಎಂದು ರೇಝರ್‌ಪೇನ ಮಾಥುರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
  
ಮುಂಬರುವ ವೈಯಕ್ತಿಕ ಮಾಹಿತಿ ರಕ್ಷಣೆ ಮಸೂದೆಯೂ ರೇಝರ್‌ಪೇನ ಕ್ರಮಗಳ ಮೇಲೆ ಯಾವುದೇ ಪರಿಣಾಮವನ್ನು ಬೀರುತ್ತಿರಲಿಲ್ಲ, ಏಕೆಂದರೆ ಇದು ಮಾಹಿತಿ ಉಲ್ಲಂಘನೆ ಅಥವಾ ಸೈಬರ್ ಭದ್ರತಾ ಲೋಪದ ಪ್ರಕರಣವಲ್ಲ. ಆದರೆ ತನಿಖಾ ಸಂಸ್ಥೆಗಳೊಂದಿಗೆ ಉದ್ದೇಶಪೂರ್ವಕ ಮಾಹಿತಿ ಹಂಚಿಕೆ ಪ್ರಕರಣವಾಗಿದೆ. ಪೊಲೀಸರು ದಾನಿಗಳ ಮಾಹಿತಿಗಳನ್ನು ಅವುಗಳನ್ನು ದುರುಪಯೋಗ ಮಾಡಿಕೊಳ್ಳಬಹುದಾದ ರಾಜಕೀಯ ಪಕ್ಷಗಳಿಗೆ ಸೋರಿಕೆ ಮಾಡಿದ್ದಾರೆ ಎಂಬ ಬಗ್ಗೆ ಸಾಕ್ಷಾಧಾರವಿದ್ದರೆ ಮಾತ್ರ ಗೋಪ್ಯತೆ ಉಲ್ಲಂಘನೆ ಕಳವಳಗಳನ್ನು ಎತ್ತಬಹುದು ಎಂದು ಶ್ರೀನಿವಾಸ್ ಹೇಳಿದ್ದಾರೆ.
  
ಹೆಚ್ಚು ಸುಭದ್ರ ಪಾವತಿ ಪರ್ಯಾಯಗಳಿವೆಯೇ?:

ಪೊಲೀಸರು ಆಲ್ಟ್ ನ್ಯೂಸ್‌ ಗೆ ದೇಣಿಗೆಗಳ ಮಾಹಿತಿಗಳನ್ನು ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ (ಎನ್ಪಿಸಿಐ),ಆರ್ಬಿಐ ಮತ್ತು ಆಲ್ಟ್ ನ್ಯೂಸ್ ನ ಖಾತೆಯಿರುವ ಬ್ಯಾಂಕ್ಗಳಿಂದಲೂ ಪಡೆದುಕೊಳ್ಳಬಹುದಿತ್ತು ಎನ್ನುತ್ತಾರೆ ಶ್ರೀನಿವಾಸ್.

ಭಾರತದಲ್ಲಿ ಕಾನೂನುಬದ್ಧವಲ್ಲದ ಕ್ರಿಪ್ಟೊಕರೆನ್ಸಿಯಲ್ಲದೆ ನಗದು ವಹಿವಾಟು ಏಕೈಕ ಪರ್ಯಾಯವಾಗಿದೆ. ಆದಾಗ್ಯೂ ಇದು ಸಂಪೂರ್ಣ ಅನಾಮಧೇಯತೆಯನ್ನು ಒದಗಿಸುವುದಿಲ್ಲ. ಇವು ದೇಣಿಗೆಗಳಾಗಿರುವುದರಿಂದ ಮತ್ತು ನಗದು ದೇಣಿಗೆಗಳಲ್ಲಿಯೂ ಕಾನೂನು ಪ್ರಕಾರ ಆಲ್ಟ್ ನ್ಯೂಸ್ ದಾನಿಗಳ ಎಲ್ಲ ಮಾಹಿತಿಗಳ ದಾಖಲೆಗಳನ್ನು ಕಾಯ್ದಿರಿಸುವುದು ಅಗತ್ಯವಾಗಿದೆ. ತನಿಖಾ ಸಂಸ್ಥೆಗಳು ಕೇಳಿದರೆ ಆಲ್ಟ್ ನ್ಯೂಸ್ ಈ ಮಾಹಿತಿಗಳನ್ನು ಒದಗಿಸಬೇಕಾಗಬಹುದು ಎನ್ನುತ್ತಾರೆ ಶ್ರೀನಿವಾಸ್.
 ‌
ರೇಝರ್‌ಪೇ ದಾನಿಗಳ ಮಾಹಿತಿಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿರುವ ಕುರಿತು ಚರ್ಚೆಯು ಚುನಾವಣಾ ಬಾಂಡ್ಗಳ ಮೂಲಕ ಅವಕಾಶ ಕಲ್ಪಿಸಲಾಗಿರುವ ಅನಾಮಧೇಯ ರಾಜಕೀಯ ದೇಣಿಗೆಗಳೊಂದಿಗೆ ಅನೇಕ ಹೋಲಿಕೆಗಳನ್ನೂ ಹುಟ್ಟುಹಾಕಿದೆ. ಯಾವುದೇ ರಾಜಕೀಯ ಚಟುವಟಿಕೆಗೆ ಅಥವಾ ಲಾಭೋದ್ದೇಶವಿಲ್ಲದ ಸಂಸ್ಥೆಗಳಿಗೆ ದೇಣಿಗೆಗಳು ಪಾರದರ್ಶಕವಾಗಿರಬೇಕು. ಅನಾಮಧೇಯ ದೇಣಿಗೆಗಳಿಗೆ ಸಂಬಂಧಿಸಿದಂತೆ ಎನ್ಜಿಒಗಳು ಭಾರೀ ಕಣ್ಗಾವಲು ಮತ್ತು ಕಠಿಣ ನಿಯಮಗಳಿಗೆ ಒಳಪಟ್ಟಿರುವಾಗ ಯಾವುದೇ ಉತ್ತರದಾಯಿತ್ವವಿಲ್ಲದೆ ಅನಾಮಧೇಯ ದೇಣಿಗೆಗಳನ್ನು ಸ್ವೀಕರಿಸಲು ರಾಜಕೀಯ ಪಕ್ಷಗಳಿಗೆ ಅವಕಾಶವನ್ನು ಮುಂದುವರಿಸಕೂಡದು ಎನ್ನುವುದನ್ನು ಪ್ರಾಣೇಶ್ ಮತ್ತು ಶ್ರೀನಿವಾಸ್ ಇಬ್ಬರೂ ಒಪ್ಪಿಕೊಂಡಿದ್ದಾರೆ.

ಕೃಪೆ: Thenewsminute.com

Writer - ಜಾಹ್ನವಿ ರೆಡ್ಡಿ (thenewsminute.com)

contributor

Editor - ಜಾಹ್ನವಿ ರೆಡ್ಡಿ (thenewsminute.com)

contributor

Similar News