ನ್ಯಾಯಾಂಗ ನಿಂದನೆ: ವಿಜಯ ಮಲ್ಯಗೆ 4 ತಿಂಗಳ ಜೈಲು ಸಜೆ, 2000 ರೂ.ದಂಡ ವಿಧಿಸಿದ ಸುಪ್ರೀಂಕೋರ್ಟ್

Update: 2022-07-11 15:18 GMT
ವಿಜಯ ಮಲ್ಯ (PTI)

ಹೊಸದಿಲ್ಲಿ,ಜು.11: ಸರ್ವೋಚ್ಚ ನ್ಯಾಯಾಲಯವು 2017ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯಗೆ ಸೋಮವಾರ ನಾಲ್ಕು ತಿಂಗಳ ಜೈಲುಶಿಕ್ಷೆಯನ್ನು ಮತ್ತು 2,000 ರೂ.ದಂಡವನ್ನು ವಿಧಿಸಿದೆ. 2017ರಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ 40 ಮಿ.ಡಾ.ಗೂ ಅಧಿಕ ಮೊತ್ತವನ್ನು ತನ್ನ ಮಕ್ಕಳಿಗೆ ವರ್ಗಾಯಿಸಿದ್ದಕ್ಕಾಗಿ ಅವರನ್ನು ನ್ಯಾಯಾಂಗ ನಿಂದನೆ ದೋಷಿ ಎಂದು ಸರ್ವೋಚ್ಚ ನ್ಯಾಯಾಲಯವು ನಿರ್ಧರಿಸಿದೆ. ದಂಡದ ಹಣವನ್ನು ಸರ್ವೋಚ್ಚ ನ್ಯಾಯಾಲಯದ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ನಾಲ್ಕು ವಾರಗಳಲ್ಲಿ ಜಮಾ ಮಾಡುವಂತೆ ಮತ್ತು ತಪ್ಪಿದಲ್ಲಿ ಎರಡು ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ಅನುಭವಿಸುವಂತೆ ಮಲ್ಯಗೆ ಆದೇಶಿಸಲಾಗಿದೆ.

‘ನ್ಯಾಯದ ಘನತೆಯನ್ನು ಎತ್ತಿ ಹಿಡಿಯಲು ನಾವು ಸಾಕಷ್ಟು ಶಿಕ್ಷೆಯನ್ನು ವಿಧಿಸಲೇಬೇಕಿದೆ ’ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್,ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಪೀಠವು ಹೇಳಿತು.

ಮಲ್ಯ ತನ್ನ ಮಕ್ಕಳಿಗೆ 40 ಮಿ.ಡಾ.ಗಳನ್ನು ವರ್ಗಾವಣೆ ಮಾಡಿದ್ದು ‘ನಿರರ್ಥಕ ಮತ್ತು ನಿಷ್ಕ್ರಿಯ ’ವಾಗಿದೆ ಎಂದೂ ಹೇಳಿದ ಸರ್ವೋಚ್ಚ ನ್ಯಾಯಾಲಯವು,ಈ ಹಣವನ್ನು ಶೇ.8ರ ಬಡ್ಡಿಯೊಂದಿಗೆ ನಾಲ್ಕು ವಾರಗಳಲ್ಲಿ ವಸೂಲಾತಿ ಅಧಿಕಾರಿಗೆ ಮರಳಿಸುವಂತೆ ಹಣವನ್ನು ಸ್ವೀಕರಿಸಿದವರಿಗೆ ಆದೇಶಿಸಿತು. ಹಣವನ್ನು ಮರಳಿಸದಿದ್ದರೆ ಮಲ್ಯರ ಆಸ್ತಿಗಳನ್ನು ಜಪ್ತಿ ಮಾಡಬಹುದು.

  ಈ ಹಣವನ್ನು ಜಮೆ ಮಾಡದಿದ್ದರೆ ಅದನ್ನು ವಸೂಲು ಮಾಡಲು ಸೂಕ್ತಕ್ರಮಗಳನ್ನು ವಸೂಲಾತಿ ಅಧಿಕಾರಿ ತೆಗೆದುಕೊಳ್ಳಬಹುದು ಮತ್ತು ಭಾರತ ಸರಕಾರ ಹಾಗೂ ಎಲ್ಲ ಸಂಸ್ಥೆಗಳು ಈ ಪ್ರಕ್ರಿಯೆಯಲ್ಲಿ ನೆರವಾಗಬೇಕು ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ. ಮಲ್ಯ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಕೈಗೊಳ್ಳುವಂತೆ ಮತ್ತು ಸಾಗರೋತ್ತರ ಸಂಸ್ಥೆ ಡಿಯಾಜಿವೊದಿಂದ ಸ್ವೀಕರಿಸಿದ್ದ 40 ಮಿ.ಡಾ.ಗಳನ್ನು ಜಮೆ ಮಾಡುವಂತೆ ಅವರಿಗೆ ನಿರ್ದೇಶ ಕೋರಿ ಎಸ್ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟವು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿತ್ತು. ಮಲ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮತ್ತು ವಾಸ್ತವಾಂಶಗಳನ್ನು ಬಚ್ಚಿಟ್ಟು ತನ್ನ ಪುತ್ರ ಸಿದ್ದಾರ್ಥ ಮಲ್ಯ ಹಾಗೂ ಪುತ್ರಿಯರಾದ ಲೀನಾ ಮಲ್ಯ ಮತ್ತು ತಾನ್ಯಾ ಮಲ್ಯ ಅವರಿಗೆ ಹಣವನ್ನು ವರ್ಗಾಯಿಸಿದ್ದಾರೆ ಎಂದು ಬ್ಯಾಂಕುಗಳು ಆರೋಪಿಸಿದ್ದವು.
 
ಮಲ್ಯ ಈಗ ನಿಷ್ಕ್ರಿಯಗೊಂಡಿರುವ ತನ್ನ ಕಿಂಗ್ಫಿಷರ್ ಏರ್ಲೈನ್ಸ್ನ್ನು ಒಳಗೊಂಡ 9,000 ಕೋ.ರೂ.ಗೂ ಅಧಿಕ ಬ್ಯಾಂಕ್ ಸಾಲ ಸುಸ್ತಿ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ಮಾ.10ರಂದು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ತನ್ನ ಆಸ್ತಿಗಳನ್ನು ಬಹಿರಂಗಗೊಳಿಸದಿರುವುದು ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯವು ಹೊರಡಿಸಿದ್ದ ನಿರ್ಬಂಧಾತ್ಮಕ ಆದೇಶಗಳ ಉಲ್ಲಂಘನೆ;ಹೀಗೆ ಎರಡು ವಿಷಯಗಳಲ್ಲಿ ಮಲ್ಯರನ್ನು ತಪ್ಪಿತಸ್ಥ ಎಂದು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಮಾರ್ಚ್ 2016ರಲ್ಲಿ ಬ್ರಿಟನ್ಗೆ ಪಲಾಯನ ಮಾಡಿದ್ದ ಮಲ್ಯ ಆಗಿನಿಂದಲೂ ಲಂಡನ್ನಲ್ಲಿ ವಾಸವಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು.

ಬ್ರಿಟನ್‌ನಿಂದ ಮಲ್ಯರ ಗಡಿಪಾರಿಗೆ ಅನುಮತಿ ಲಭಿಸಿದೆಯಾದರೂ ಅಲ್ಲಿ ಅವರ ವಿರುದ್ಧ ಕೆಲವು ‘ಗೋಪ್ಯ’ ಕಾನೂನು ಕ್ರಮಗಳು ಬಾಕಿಯುಳಿದಿರುವುದರಿಂದ ಅವರನ್ನು ಭಾರತಕ್ಕೆ ತರಲು ಸಾಧ್ಯವಾಗಿಲ್ಲ ಮತ್ತು ಸದ್ರಿ ಕಾನೂನು ಕ್ರಮಗಳ ವಿವರಗಳು ತನಗೆ ತಿಳಿದಿಲ್ಲ ಎಂದು ನ್ಯಾಯಾಲಯವು ಈ ಹಿಂದೆ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.

ಖುದ್ದು ಹಾಜರಾತಿಗೆ ಮಲ್ಯಗೆ ಅವಕಾಶ ನೀಡಲು ನ್ಯಾಯಾಲಯವು ಕೆಲವು ಸಲ ವಿಚಾರಣೆಯನ್ನು ಮುಂದೂಡಿತ್ತು,ಆದರೆ ಹಾಜರಾಗಲು ನಿರಾಕರಣೆಯ ಹಿನ್ನೆಲೆಯಲ್ಲಿ ಅವರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಲು ಅಂತಿಮವಾಗಿ ನಿರ್ಧರಿಸಿತ್ತು. ‘ಗೈರು ಹಾಜರಿ’ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ನೆರವಾಗಲು ಹಿರಿಯ ವಕೀಲ ಜೈದೀಪ ಗುಪ್ತಾ ಅವರನ್ನು ಪ್ರಕರಣದಲ್ಲಿ ಅಮಿಕಸ್ ಕ್ಯೂರಿ ಆಗಿ ನೇಮಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News