ಝಮೀರ್ ಅಹ್ಮದ್ ನಿವಾಸದ ಮೇಲೆ ಎಸಿಬಿ ದಾಳಿ ಪ್ರಕರಣ: ದಾಖಲೆ ಸಲ್ಲಿಕೆಗೆ ಸೂಚನೆ
ಬೆಂಗಳೂರು, ಜು.11: ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಖಾನ್ ಅವರ ನಿವಾಸದ ಮೇಲೆ ಎಸಿಬಿ ದಾಳಿ ಪ್ರಕರಣ ಸಂಬಂಧ ಗಳಿಕೆಯ ಆದಾಯ ಮೂಲಗಳ ಕುರಿತು ದಾಖಲೆ ಸಲ್ಲಿಕೆ ಮಾಡುವಂತೆ ಎಸಿಬಿ ಸೂಚಿಸಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆದಾಯಕ್ಕಿಂತ ಎರಡು ಸಾವಿರ ಪಟ್ಟು ಜಾಸ್ತಿ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ 87 ಕೋಟಿ ಹೆಚ್ಚುವರಿ ಆಸ್ತಿಯ ಸಮರ್ಪಕ ದಾಖಲೆಗಳನ್ನು ಒದಗಿಸುವಂತೆ ಎಸಿಬಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ದಾಳಿ ನಡೆದ ಮಾರನೇ ದಿನವೇ ಕಚೇರಿಗೆ ಬಂದು ದಾಖಲೆ ಒದಗಿಸುವಂತೆ ಎಸಿಬಿ ಅಧಿಕಾರಿಗಳು ತಿಳಿಸಿದ್ದು, ಬಕ್ರೀದ್ ಕಾರಣ ನೀಡಿ ಝಮೀರ್ ಕಾಲಾವಕಾಶ ಪಡೆದಿದ್ದರು. ಸದ್ಯ ಬಕ್ರೀದ್ ಮುಗಿದಿರುವ ಹಿನ್ನೆಲೆ ದಾಖಲೆ ಸಮೇತ ಎಸಿಬಿ ಅಧಿಕಾರಿಗಳ ಮುಂದೆ ಝಮೀರ್ ಹಾಜರಾಗಬೇಕಿದೆ.
ಆದಾಯಕ್ಕಿಂತ ಶೇ.2031 ಪಟ್ಟು ಹೆಚ್ಚು ಅಕ್ರಮ ಆಸ್ತಿಯನ್ನು ಝಮೀರ್ ಅಹ್ಮದ್ ಖಾನ್ ಸಂಪಾದಿಸಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳ ವರದಿಯಲ್ಲಿ ಉಲ್ಲೇಖಿಸಿತ್ತು.
ಪ್ರಮುಖವಾಗಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಸಮೀಪ ಬಂಬೂ ಬಜಾರ್‍ನಲ್ಲಿರುವ ಝಮೀರ್ ಅವರ ದುಬಾರಿ ಬೆಲೆಯ ಮನೆ, ಸದಾಶಿವ ನಗರದಲ್ಲಿರುವ ಅತಿಥಿ ಗೃಹ, ಕಲಾಸಿಪಾಳ್ಯದಲ್ಲಿನ ಅವರ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಕಂಪೆನಿಯ ಕಚೇರಿ, ಓಕಾ ಅಪಾರ್ಟ್‍ಮೆಂಟ್ ಫ್ಲ್ಯಾಟ್ ಹಾಗೂ ಬನಶಂಕರಿಯ ಜಿ.ಕೆ. ಆಸೋಸಿಯೇಟ್ಸ್ ಕಚೇರಿ ಸೇರಿ ಐದು ಸ್ಥಳಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು.