ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಟೂಲ್‍ಕಿಟ್ ಹಗರಣದಲ್ಲಿ ಸಚಿವ ಅಶ್ವತ್ಥನಾರಾಯಣ ಭಾಗಿ: ಆಪ್ ಆರೋಪ

Update: 2022-07-11 16:53 GMT

ಬೆಂಗಳೂರು, ಜು.11: ಸಚಿವ ಸಿ.ಎನ್ ಅಶ್ವತ್ಥನಾರಾಯಣ ಅವರ ಒತ್ತಡ ಹಾಗೂ ನೇರ ಹಸ್ತಕ್ಷೇಪದಿಂದಾಗಿ ನಕಲಿ ಕಂಪನಿಗೆ 22 ಕೋಟಿ ರೂ. ಮೊತ್ತದ ಸಾಮಗ್ರಿಗಳನ್ನು ಪೂರೈಸಲು ಅನುಮತಿ ನೀಡಿದ್ದು, ಈ ಮೂಲಕ ರಾಜ್ಯ ಬಿಜೆಪಿ ಸರಕಾರವು ಶೇ.40 ಕಮಿಷನ್ ಭ್ರಷ್ಟಾಚಾರವನ್ನು ಮುಂದುವರಿಸಿದೆ ಎಂದು ಎಎಪಿ ಮುಖಂಡ ಮೋಹನ್ ದಾಸರಿ ಆರೋಪಿಸಿದ್ದಾರೆ.

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದ ಎಲ್ಲ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ 13 ಸಾವಿರ ವಿದ್ಯಾರ್ಥಿಗಳಿಗೆ 22 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಸಲಕರಣೆಗಳನ್ನು ಒಳಗೊಂಡ ಟೂಲ್‍ಕಿಟ್‍ಗಳನ್ನು ಖರೀದಿಸಿ ವಿತರಿಸುವ ಟೆಂಡರ್ ಅನ್ನು ಇಂಟಲೆಕ್ ಸಿಸ್ಟಮ್ ಕಂಪನಿಗೆ ನೀಡಲಾಗಿದೆ. ಮೊದಲ ಬಾರಿ ನಡೆದ ಟೆಂಡರ್ ನಲ್ಲಿ ಈ ಕಂಪನಿಯು ತಾಂತ್ರಿಕವಾಗಿ ಅರ್ಹತೆ ಹೊಂದಿಲ್ಲ ಎಂದು ಕಂಪನಿಗೆ ಟೆಂಡರ್ ನೀಡಲು ನಿರಾಕರಿಸಲಾಗಿತ್ತು. ಆದರೆ ಮರುಟೆಂಡರ್ ನಲ್ಲಿ ಈ ಕಂಪನಿಗೆ ಅನುವು ಮಾಡಿಕೊಡಲಾಗಿದೆ. ಆ ಮೂಲಕ ಇಲಾಖೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿರುವುದು ಕಂಡು ಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಟೂಲ್‍ಕಿಟ್ ಅವ್ಯವಹಾರ ಆರೋಪ: ಸಚಿವ ಅಶ್ವತ್ಥನಾರಾಯಣ ಪ್ರತಿಕ್ರಿಯೆ 

ಕಂಪೆನಿಯು ಈ ಹಿಂದೆ ಬೇರೆಯವರಿಗೆ 22 ಕೋಟಿ ರೂ. ಹಾಗೂ 11 ಕೋಟಿ ರೂ. ಮೊತ್ತದ ಸಾಮಗ್ರಿಗಳನ್ನು ಪೂರೈಸಿರುವಂತೆ ನಕಲಿ ಜಿಎಸ್‍ಟಿ ಬಿಲ್‍ಗಳನ್ನು ಸೃಷ್ಟಿಸಲಾಗಿದೆ. ಬಿಲ್‍ಗಳನ್ನು ಜಿಎಸ್‍ಟಿ ಮಂಡಳಿಯವರು ನಕಲಿ ಎಂದು ರುಜುವಾತು ಪಡಿಸಿದ್ದಾರೆ. ಆದರೂ ಇದೇ ಕಂಪನಿಗೆ ಇಲಾಖೆಯ ಕಾರ್ಯದರ್ಶಿಗಳು ಮತ್ತು ಸಚಿವ ಅಶ್ವತ್ಥ್ ನಾರಾಯಣ ಅವರು ಸಾಮಗ್ರಿಗಳನ್ನು ಪೂರೈಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಟೆಂಡರ್ ಪಡೆದ ಇಂಟಲೆಕ್ ಸಿಸ್ಟಮ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವರಿಗೆ ನೀಡಿರುವ ಅನುಮೋದನೆಯನ್ನು ರದ್ದುಗೊಳಿಸಬೇಕು. ಹಗರಣದಲ್ಲಿ ಶಾಮೀಲಾದ ಹಿರಿಯ ಅಧಿಕಾರಿಗಳು ಮತ್ತು ಸಚಿವ ಅಶ್ವತ್ಥನಾರಾಯಣ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಿಚಾರಣೆಗೆ ಒಳಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಚಿವ ಅಶ್ವತ್ಥನಾರಾಯಣ ಮನೆ ಮುಂದೆ ವಿದ್ಯಾರ್ಥಿಗಳ ಜೊತೆಗೆ ಆಮ್ ಆದ್ಮಿ ಪಕ್ಷವು ಬೃಹತ್ ಮಟ್ಟದ ಹೋರಾಟವನ್ನು ನಡೆಸಲಾಗುತ್ತದೆ ಎಂದು ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಚನ್ನಪ್ಪಗೌಡ ನೆಲ್ಲೂರು, ಉಷಾ ಮೋಹನ್ ಸೇರಿದಂತೆ ಇನ್ನಿತರ ಮುಖಂಡರುಗಳು ಭಾಗವಹಿಸಿದ್ದರು.

ಕಳೆದ ವರ್ಷ 2021ರ ಸೆಪ್ಟೆಂಬರ್ ತಿಂಗಳಲ್ಲಿನ ಮಂತ್ರಿಮಂಡಲ ಸಭೆಯಲ್ಲಿ ಈ ಸಾಮಗ್ರಿಗಳ ಪೂರೈಕೆಗೆ ಕೇವಲ 17 ಕೋಟಿ ರೂ.ಗಳು ಮೀಸಲಿಟ್ಟಿದ್ದರು. ನಂತರ ನಡೆದ ಟೆಂಡರ್ ಗೋಲ್‍ಮಾಲ್‍ನಲ್ಲಿ ಈ ಮೊತ್ತ 22 ಕೋಟಿ ರೂ.ಗೆ ಹೆಚ್ಚಾಗಿದೆ. ಇದರ ಹಿಂದೆಯೂ ಸಚಿವರ ಪರಮ ಭ್ರಷ್ಟಾಚಾರ ಅಡಗಿದೆ. ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಈ ರೀತಿಯ ಯೋಜನೆಗಳಲ್ಲಿಯೂ ಸಚಿವರು ತನ್ನ ಭ್ರಷ್ಟಾಚಾರದ ಕಬಂಧ ಬಾಹುಗಳನ್ನು ಚಾಚುತ್ತಿರುವುದು ತೀರಾ ದುರದೃಷ್ಟಕರ ಸಂಗತಿಯಾಗಿದೆ. 

-ಮೋಹನ್ ದಾಸರಿ, ಎಎಪಿ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News