ನಾಳೆ (ಜು.12) ಚಾಮರಾಜಪೇಟೆ ಬಂದ್​ಗೆ ಕರೆ: ಬಿಗಿ ಪೊಲೀಸ್ ಬಂದೋಬಸ್ತ್

Update: 2022-07-11 13:29 GMT
ಫೈಲ್ ಚಿತ್ರ

ಬೆಂಗಳೂರು, ಜು.11: ಆಟದ ಮೈದಾನ ವಿವಾದ ಸಂಬಂಧ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ವೇದಿಕೆ ನಾಳೆ (ಜು.12) ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಬಂದ್​ಗೆ ಕರೆ ನೀಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ನಾಳೆ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಚಾಮರಾಜಪೇಟೆ 7ನೇ ಕ್ರಾಸ್​ನಲ್ಲಿರುವ ಆಟದ ಮೈದಾನ ಬಿಬಿಎಂಪಿ ಸ್ವತ್ತಾಗಿ ಉಳಿಯುವಂತೆ ಒತ್ತಾಯಿಸಿ ಬಂದ್​ಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಕರೆ ಕೊಟ್ಟಿದೆ.

ಆಸ್ಪತ್ರೆ, ಔಷಧ ಅಂಗಡಿ ಮತ್ತು ಹಾಲಿನ ಕೇಂದ್ರ ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟು, ಕಚೇರಿ, ಮಾಲ್​ ಮತ್ತು ಶಾಲಾ ಕಾಲೇಜು ತೆರೆಯದೆ ಸ್ವಯಂಪ್ರೇರಿತವಾಗಿ ಬಂದ್​ಗೆ ಬೆಂಬಲ ಇರಲಿದೆ ಎಂದು ನಾಗರಿಕ ವೇದಿಕೆ ಸದಸ್ಯರು ತಿಳಿಸಿದ್ದಾರೆ.

ಚಾಮರಾಜಪೇಟೆ ವ್ಯಾಪ್ತಿಯ ಏಳು  ವಾರ್ಡ್ ಗಳ ಬಂದ್ ನಾಗರೀಕರ ಒಕ್ಕೂಟದ ವೇದಿಕೆ ಕರೆ ಕೊಟ್ಟಿದೆ. ಇದಕ್ಕೆ ಹಿಂದೂಪರ ಸಂಘಟನೆಗಳು ಒಳಗೊಂಡತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಮತ್ತೊಂದೆಡೆ, ಶಾಲಾ-ಕಾಲೇಜು, ಬೇಕರಿ, ಅಂಗಡಿಗಳಿಗೆ ಸೇರಿದಂತೆ ಮನೆ ಮನೆಗೆ ತೆರಳಿ  ಕರಪತ್ರಗಳನ್ನು ಹಂಚಿಕೆ ಮಾಡಿ ಬಂದ್ ಗೆ ಬೆಂಬಲ ಕೋರಲಾಗಿದೆ‌.

ಈ ಕುರಿತು ಪ್ರತಿಕ್ರಿಯಿಸಿದ ವೇದಿಕೆ ಸದಸ್ಯರೊಬ್ಬರು, ‌ಇದು ಸ್ವಯಂ ಪ್ರೇರಿತ ಹಾಗೂ ಶಾಂತಿಯುತ ಬಂದ್ ಆದ್ದರಿಂದ ನಾಳೆ ಯಾವುದೇ ರೀತಿಯ ಮೆರವಣಿಗೆ, ಪ್ರತಿಭಟನೆ ಇರುವುದಿಲ್ಲ. ಕೇವಲ ಒಂದು ದಿನದ ಮಟ್ಟಿಗೆ ಶಾಂತಿಯುತ ಬಂದ್ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರಿಲು ಮುಂದಾಗಿದ್ದೇವೆ ಎಂದರು.

ಬೇಡಿಕೆಗಳೇನು?: ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಬೇಕು. ಮೈದಾನವನ್ನು ಆಟದ ಮೈದಾನವನ್ನಾಗಿಯೇ ಉಳಿಸಬೇಕು. ಚಾಮರಾಜಪೇಟೆ ಮೈದಾನಕ್ಕೆ ಜಯಚಾಮರಾಜೇಂದ್ರ ಮೈದಾನ ಎಂದು ನಾಮಕರಣ ಮಾಡಬೇಕು. ಯಾವುದೇ ಕಾರಣಕ್ಕೂ ವಕ್ಫ್​ ಬೋರ್ಡ್ ಗೆ ವಹಿಸಬಾರದು. ಮೈದಾನ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಡಲು ರಮಿತಿ ರಚಿಸಬೇಕು. 

ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ, ಕನ್ನಡ ರಾಜ್ಯೋತ್ಸವ, ಶಿವರಾತ್ರಿ, ನಾಡಹಬ್ಬ ದಸರಾ ಸೇರಿದಂತೆ ಹಿಂದೂ ಹಬ್ಬಗಳ ಆಚರಣೆಗೆ ಅನುಮತಿ ನೀಡುವಂತೆ ಒತ್ತಾಯ ಮಾಡಲಾಗಿದೆ.

ಹೆಚ್ಚುವರಿ ಪೊಲೀಸರ ನಿಯೋಜನೆ..!

ಮಂಗಳವಾರ ಚಾಮರಾಜಪೇಟೆ ಬಂದ್​​ಗೆ ಕೈಗೊಳ್ಳಬೇಕಾದ ಬಂದೋಬಸ್ತ್ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಹೆಚ್ಚುವರಿ ಪೊಲೀಸರ ನಿಯೋಜಿಸಿ, ಕಾನೂನು ಸುವ್ಯವಸ್ಥೆ ಹದಗೆಡದ ರೀತಿಯಲ್ಲಿ ಎಲ್ಲ ಬಂದೋಬಸ್ತ್ ಮಾಡಿದ್ದೇವೆ.

- ಆರಗ ಜ್ಞಾನೇಂದ್ರ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News