ಸಿಎಂ ಬೊಮ್ಮಾಯಿ ಮನೆಗೆ ರೈತರ ಮುತ್ತಿಗೆ ಯತ್ನ: ಪೊಲೀಸ್ ವಶಕ್ಕೆ

Update: 2022-07-11 15:38 GMT

ಬೆಂಗಳೂರು, ಜು.11: ಒಂದು ಟನ್ ಕಬ್ಬಿಗೆ 4,500 ರೂ., ನಿಗದಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾವಿರಾರು ರೈತರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಸೋಮವಾರ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಕರ್ನಾಟಕ ರಾಜ್ಯ ಸಂಘ ನೇತೃತ್ವದಲ್ಲಿ ಜಮಾಯಿಸಿದ ಸಾವಿರಾರು ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ರೈತರನ್ನು ವಶಕ್ಕೆ ಪಡೆದರು.

ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ಸಾವಿರಾರು ರೈತರು ಮೆಜೆಸ್ಟಿಕ್‍ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸೇರಿ, ಅಲ್ಲಿಂದ  ರೈತರು, ಹಸಿರು ಶಾಲು ಧರಿಸಿ ಸರಕಾರದ ವಿರುದ್ದ ಧಿಕ್ಕಾರ ಕೂಗುತ್ತಿದ್ದಂತೆ ಪೆÇಲೀಸರು ವಶಕ್ಕೆ ಪಡೆದರು.

ಮತ್ತೊಂದೆಡೆ, ಕೆಎಸ್ಸಾರ್ಟಿಸಿ ಬಸ್‍ನಲ್ಲಿ ಬಂದ ರೈತರನ್ನು ಮುಖ್ಯಮಂತ್ರಿ ಕಚೇರಿ ಕೃಷ್ಣಾ ಕಡೆ ಸುಳಿಯಲು ಕೂಡ ಪೊಲೀಸರು ಬಿಡಲಿಲ್ಲ. ಈ ಸಂದರ್ಭದಲ್ಲಿ ರೈತ ಮುಖಂಡರು ಹಾಗೂ ಪೊಲೀಸರೊಂದಿಗೆ ವಾಗ್ವಾದ ಜರುಗಿತು.

ಬೇಡಿಕೆ ಈಡೇರಿಸಲು ಪಟ್ಟು: ಒಂದು ಟನ್ ಕಬ್ಬಿಗೆ 4,500 ರೂ. ನಿಗದಿ ಮಾಡಬೇಕು. ಹಳೆಯ ಬಾಕಿ ಹಣ ಪಾವತಿ ಮಾಡಬೇಕು. ಕಬ್ಬು ಬೆಳೆಗಾರರ ಬೆಲೆ ಮೋಸ ಮತ್ತು ತೂಕ ವಂಚನೆಯನ್ನು ನಿಲ್ಲಿಸಬೇಕು, ಎಫ್‍ಆರ್‍ಪಿ ಬೆಲೆಯಂತೆ ರೈತರ ಕಬ್ಬನ್ನು ಖರೀದಿ ಮಾಡಬೇಕು. ಗೃಹ ವಿದ್ಯುತ್ ಬಾಕಿ ವಸೂಲಿಯನ್ನು ನಿಲ್ಲಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ರೈತ ನಾಯಕ ಪ್ರೊ.ಎಂ.ಡಿ. ನಂಜುಡಸ್ವಾಮಿ ನೇತೃತ್ವದಲ್ಲಿ ಈ ಹಿಂದೆ ವಿದ್ಯುತ್ ತಾರತಮ್ಯದ ವಿರುದ್ಧ ಕರಾ ನಿರಾಕರಣೆ ಚಳುವಳಿಗೆ ಕರೆ ನೀಡಿದ್ದರು. ಇದರಿಂದ ರಾಜ್ಯದ ಸಾವಿರಾರು ರೈತರು ವಿದ್ಯುತ್ ಬಿಲ್‍ನ್ನು ಪಾವತಿ ಮಾಡಿರಲಿಲ್ಲ. 

2017ರಲ್ಲಿ ರಾಜ್ಯ ಸರಕಾರ ಹಳೆ ಬಿಲ್‍ನ್ನು ಮನ್ನಾ ಮಾಡುತ್ತೇವೆ. ಹೊಸ ಮೀಟರ್ ಹಾಕುತ್ತೇವೆ. ಹೊಸ ದರ ಪಾವತಿ ಮಾಡಿಕೊಂಡು ಹೋಗುವಂತೆ ಸೂಚನೆ ನೀಡಿದ್ದರು. ಈಗ ಸರಕಾರ ಹಳೆಯ ಬಿಲ್‍ನ್ನು ವಸೂಲಿ ಮಾಡಲು ಮುಂದಾಗಿದೆ. ಈ ಕರಾ ನಿರಾಕರಣೆ ಚಳುವಳಿಯಲ್ಲಿ ಹಳೆಯ ಬಿಲ್ ಪಾವತಿ ಮಾಡಿಸಿಕೊಳ್ಳದಂತೆ ಕಬ್ಬು ಬೆಳೆಗಾರರಿಗೆ ನ್ಯಾಯ ನೀಡಿ ಎಂದು ಮನವಿ ಮಾಡಿದ್ದು, ಹೀಗಾಗಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಿದ್ದೇವೆ ಎಂದು ಹೋರಾಟಗಾರರು ತಿಳಿಸಿದರು.

ಸಿಎಂ ಮಂಡ್ಯಕ್ಕೆ ಬರಬೇಕು

ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಲು ವಿದ್ಯುತ್ ಬಾಕಿ ವಸೂಲಿ ವಿರುದ್ಧ ರೈತರು ಪ್ರತಿಭಟಿಸಿದ್ದಾರೆ. ಆದರೆ ಪೊಲೀಸರು ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಬಿಗಡಾಯಿಸುವಂತೆ ಮಾಡುತ್ತಿದ್ದಾರೆ. ಎಲ್ಲರನ್ನೂ ವಶಕ್ಕೆ ಪಡೆಯುತ್ತಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಬಗೆಹರಿಸಬೇಕೆಂದು ನಾವು ಒತ್ತಾಯಿಸಿದ್ದೇವೆ. ಮಂಗಳವಾರ(ಜು.12) ಮಂಡ್ಯಕ್ಕೆ ಮುಖ್ಯಮಂತ್ರಿ ಬರಲೇಬೇಕು. 

-ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ 

---------

ಕಪ್ಪು ಬಾವುಟ ಪ್ರದರ್ಶನ

ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಆಗಮಿಸಿದ್ದ ರೈತರನ್ನು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದರು. ಪೊಲೀಸರು ನಮ್ಮನ್ನ ವಶಕ್ಕೆ ಪಡೆದರೂ ಮುತ್ತಿಗೆ ಹಾಕುತ್ತೇವೆ. ಒಂದೊಮ್ಮೆ ನಮಗೆ ಪೊಲೀಸರು ಅವಕಾಶ ನೀಡದಿದ್ದರೆ, ಕೆಆರ್‍ಎಸ್‍ಗೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಬಂದಾಗ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ.

-ದರ್ಶನ್ ಪುಟ್ಟಣ್ಣಯ್ಯ, ರೈತ ಮುಖಂಡ

ಸಿಎಂ ಸಭೆ

ರೈತರ ಮುತ್ತಿಗೆ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತ ನಾಯಕರೊಂದಿಗೆ ಸಭೆ ನಡೆಸಿದರು. ಬೇಡಿಕೆ ಈಡೇರಿಸಲು ಸರಕಾರ ಬದ್ಧವಾಗಿದ್ದು, ಶೀಘ್ರದಲ್ಲೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News