ಎಲ್ಲವನ್ನು ಧಾರ್ಮಿಕ ನೆಲೆಗಟ್ಟಿನಿಂದ ನೋಡುವ ಹೊಸ ಬೆಳವಣಿಗೆ ಹುಟ್ಟಿಕೊಂಡಿದೆ: ಎಲ್ ಹನುಮಂತಯ್ಯ

Update: 2022-07-11 16:35 GMT

ಬೆಂಗಳೂರು, ಜು.11: ದೇಶದಲ್ಲಿ ಹೊಸ ಚಿಂತನೆ ಬೆಳವಣಿಗೆ ಆಗುತ್ತಿದೆ. ಅದೇನೆಂದರೆ ದೇಶದಲ್ಲಿ ಎಲ್ಲವನ್ನು ಧಾರ್ಮಿಕ ನೆಲೆಗಟ್ಟಿನಿಂದ ನೋಡಲಾಗುತ್ತಿದೆ ಎಂದು ಸಾಹಿತಿ ಮತ್ತು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಅವರು ಕಳವಳ ವ್ಯಕ್ತಪಡಿಸಿದರು. 

ಸೋಮವಾರ ನಗರದ ಗಾಂಧಿ ಭವನದಲ್ಲಿ ವಿಚಾರಗೋಷ್ಠಿ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ 75 ವರ್ಷಗಳಿಂದ ಇಂತಹ ಪ್ರವೃತ್ತಿ ಇರಲಿಲ್ಲ. ಈಗ ಶಿಕ್ಷಣ, ಊಟ, ಉಡುಪು ಸೇರಿದಂತೆ ಎಲ್ಲವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ನೋಡುವಂತಾಗಿದೆ. ಪಠ್ಯಪರಿಷ್ಕರಣೆಯ ಹೆಸರಿನಲ್ಲಿ ಮಕ್ಕಳಿಗೆ ಆರೆಸ್ಸೆಸ್ ಚಿಂತನೆಗಳನ್ನು ಹೇಳಿ ಕೊಡಲಾಗುತ್ತಿದೆ. ಚಾತುರ್ವರ್ಣ ಸಮಾಜವನ್ನು ಮರುಸೃಷ್ಟಿ ಮಾಡಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು. 

ಪಠ್ಯಪರಿಷ್ಕರಣೆಗೆ ರಚಿಸಿದ ಸಮಿತಿಗೆ ಸರಕಾರವು ಸೂಕ್ತ ಆದೇಶವನ್ನು ಹೊರಡಿಸಿಲ್ಲ. ಹಾಗಾಗಿ ವಿವಾದ ಮನೆಮನೆಗೆ ತಲುಪಿದೆ. ದೇಶದ ಅಭಿವೃದ್ಧಿಗೆ ಪಠ್ಯಪರಿಷ್ಕರಣೆ ಮಾಡಿದ್ದರೆ, ಯಾರು ವಿರೋಧಿಸುತ್ತಿರಲಿಲ್ಲ. ದೇಶದಲ್ಲಿ ಹಿಂದುಗಳು ಶ್ರೇಷ್ಠರು, ಉಳಿದವರು ಕನಿಷ್ಠರು ಎಂದು ತೋರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಮಕ್ಕಳು ಓದುವ ಪಠ್ಯ ಪುಸ್ತಕವನ್ನು ರಾಜಕೀಯದಿಂದ ದೂರವಿಡಬೇಕು. ಆದರೆ ಈ ಸರಕಾರವು ಅದನ್ನು ರಾಜಕಾರಣಗೊಳಿಸುತ್ತಿರುವುದು ಸರಿಯಲ್ಲ ಎಂದ ಅವರು, ರಾಜ್ಯದಲ್ಲಿ ಸೃಷ್ಟಿಯಾಗಿರುವ ಪಠ್ಯಪರಿಷ್ಕರಣೆಯ ಬಗ್ಗೆ ಮಿತಿಮೀರಿ ಚರ್ಚೆಗಳು ನಡೆದಿವೆ. ಈಗ ಪುಸ್ತಕವನ್ನು ಹೊರತರಲಾಗುತ್ತಿದೆ ಎಂದು ಅವರು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣತಜ್ಞ ನಿರಂಜನಾರಾಧ್ಯ ಹಾಗೂ ರಾಮಕೃಷ್ಣ ಅವರು ಬರೆದಿರುವ ಪಠ್ಯ ಮರು ಪರಿಷ್ಕರಣೆ: ಹಿನ್ನೆಲೆ-ಮುನ್ನೆಲೆ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಬರಹಗಾರ ರಾಜಪ್ಪ ದಳವಾಯಿ, ಕೆ. ಷರೀಫಾ, ಗೋಪಾಲಕೃಷ್ಣ ಹರಳಹಳ್ಳಿ, ಬಿ. ರಾಜಶೇಖರಮೂರ್ತಿ ಅವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News