ಆ.5ರಿಂದ ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ | ನಟ ಪುನೀತ್, ಗಾಜನೂರಿನ ನಿವಾಸ ಈ ಬಾರಿಯ ಆಕರ್ಷಣೆ: ಸಚಿವ ಮುನಿರತ್ನ

Update: 2022-07-12 13:30 GMT

ಬೆಂಗಳೂರು, ಜು. 12: ‘ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ತಾತ್ಕಾಲಿಕವಾಗಿ ನಿಲ್ಲಿಸಿದ್ದ ಬೆಂಗಳೂರಿನ ಲಾಲ್‍ಬಾಗ್‍ನ ‘ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ'ವನ್ನು ಆಗಸ್ಟ್ 5ರಿಂದ 15ರವರೆಗೆ ಅತ್ಯಂತ ಆಕರ್ಷಕವಾಗಿ ಏರ್ಪಡಿಸಲಾಗುತ್ತಿದೆ' ಎಂದು ತೋಟಗಾರಿಕೆ ಸಚಿವ ಮುನಿರತ್ನ ಇಂದಿಲ್ಲಿ ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ಬಾರಿ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ ನಟ ಪುನೀತ್ ರಾಜ್‍ಕುಮಾರ್ ಹಾಗೂ ಗಾಜನೂರಿನ ಅವರ ನಿವಾಸ ಅತ್ಯಂತ ವಿಶೇಷವಾಗಿರಲಿದೆ. ಆಗಸ್ಟ್ 5ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟದ ಸಹೋದ್ಯೋಗಿಗಳ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ' ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಕೋವಿಡ್ ಸೋಂಕು ಇನ್ನೂ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಹೀಗಾಗಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಸರಕಾರದ ಮಾರ್ಗಸೂಚಿಯನ್ನು ಅನುಸರಿಸಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ಆಗಸ್ಟ್ 5ರಿಂದ 15ರವರೆಗೆ ಪ್ರದರ್ಶನ ಇರಲಿದೆ. ಆದರೆ, ಆಗಸ್ಟ್ 15ರ ಬಳಿಕವೂ ಒಂದೆರಡು ದಿನಗಳ ಕಾಲ ಮುಂದುವರಿಸುವ ಸಂಬಂಧ ಚರ್ಚಿಸಲಾಗುತ್ತಿದೆ' ಎಂದು ಮುನಿರತ್ನ ಇದೇ ವೇಳೆ ವಿವರಣೆ ನೀಡಿದರು.

‘ಯುವ ಸಮುದಾಯದ ನೆಚ್ಚಿನ ನಟ ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ ನಡೆಯುತ್ತಿರುವ ಈ ಬಾರಿಯ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಜನಾಕರ್ಷಣೆಯ ದೃಷ್ಟಿಯಿಂದ ವಿದೇಶಿ ಪುಷ್ಪಗಳಿಂದ ಅಲಂಕರಿಸಲು ಉದ್ದೇಶಿಸಲಾಗಿದೆ. ಹೀಗಾಗಿ ದೇಶ-ವಿದೇಶಗಳಿಂದ ಹತ್ತು-ಹಲವು ಬಗೆಯ ಪುಷ್ಪಗಳನ್ನು ತರಿಸಲಾಗುತ್ತಿದೆ' ಎಂದು ಮುನಿರತ್ನ ಮಾಹಿತಿ ನೀಡಿದರು.

ರೈತರ ಜೊತೆಗೆ ಇದ್ದೇವೆ: ‘ಎಂಟರಿಂದ ಹತ್ತು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ, ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೋಟಗಾರಿಕೆ ಬೆಳೆಗಳು ಹಾನಿಯಾಗಿದೆ. ಈ ಸಂಬಂಧ ಕೂಡಲೇ ಪರಿಶೀಲಿಸಿ ವರದಿ ನೀಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದು ಮುನಿರತ್ನ ಹೇಳಿದರು.

‘ಅಧಿಕಾರಿಗಳು ತೋಟಗಾರಿಕೆ ಬೆಳೆಹಾನಿಗೆ ಸಂಬಂಧಿಸಿದಂತೆ ವರದಿ ನೀಡದ ಬಳಿಕ ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ರೈತರಿಗೆ ನಷ್ಟದ ಮೊತ್ತವನ್ನು ಅಂದಾಜು ಮಾಡಿ ಸರಕಾರದ ಮಾರ್ಗಸೂಚಿ ಅನ್ವಯ ಆದ್ಯತೆ ಮೇಲೆ ಪರಿಹಾರ ನೀಡಲಾಗುವುದು. ನಮ್ಮ ಸರಕಾರ ಅತ್ಯಂತ ಪ್ರಾಮಾಣಿಕವಾಗಿ ರೈತರ ಜೊತೆ ನಿಲ್ಲಲಿದೆ' ಎಂದು ಮುನಿರತ್ನ ಇದೇ ವೇಳೆ ಅಭಯ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News