ಚಾಮರಾಜಪೇಟೆ ಬಂದ್‍ಗೆ ಸಿಗದ ಬೆಂಬಲ: ಎಂದಿನಂತೆ ಜನರ ಓಡಾಟ, ವ್ಯವಹಾರ

Update: 2022-07-12 13:47 GMT

ಬೆಂಗಳೂರು, ಜು.12: ಈದ್ಗಾ ಮೈದಾನ ವಿವಾದ ಸಂಬಂಧ ಮಂಗಳವಾರ ಚಾಮರಾಜಪೇಟೆ ನಾಗರಿಕ ವೇದಿಕೆ, ಹಿಂದುತ್ವ ಸಂಘಟನೆಗಳು ಕರೆ ನೀಡಿದ್ದ ‘ಚಾಮರಾಜಪೇಟೆ ಬಂದ್’ಗೆ ಸೂಕ್ತ ರೀತಿಯಲ್ಲಿ ಬೆಂಬಲ ದೊರೆಯದ ಕಾರಣ, ಎಂದಿನಂತೆ ಜನಜಂಗುಳಿ ಕಂಡುಬಂದಿತು.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‍ಗಳ ಪೈಕಿ ಬರೀ ಚಾಮರಾಜಪೇಟೆ ವಾರ್ಡ್‍ನ ಮುಖ್ಯ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟು, ವ್ಯಾಪಾರ ಚಟುವಟಿಕೆಗಳು ಬಂದ್ ಆಗಿದ್ದವು. ಜತೆಗೆ, ಅಹಿತಕರ ಘಟನೆಗಳು ನಡೆಯಬಹುದು ಎನ್ನುವ ಆತಂಕದಲ್ಲಿ ಕೆಲ ಖಾಸಗಿ ಶಾಲೆಗಳಲ್ಲಿ ರಜೆ ಘೋಷಿಸಲಾಗಿತ್ತು.

ಇನ್ನುಳಿದ ಗೋರಿಪಾಳ್ಯ, ಜೆ.ಜೆ ನಗರ, ಕೆಆರ್ ಮಾರುಕಟ್ಟೆ, ಪಾದರಾಯನಪುರ, ಭಕ್ಷಿಗಾರ್ಡನ್, ಆಝಾದ್ ನಗರ ವಾರ್ಡ್‍ಗಳಲ್ಲಿ ಬಂದ್‍ಗೆ ಬೆಂಬಲ ನೀಡದ ಹಿನ್ನೆಲೆ ಸಂಚಾರದಟ್ಟಣೆ, ಜನರ ಓಡಾಟ ಎಂದಿನಂತೆ ಕಂಡುಬಂದಿತು.

ಅಂಗಡಿ ಬಂದ್‍ಗೆ ಪಟ್ಟು: ಇಲ್ಲಿನ ಈದ್ಗಾ ಮೈದಾನ ವ್ಯಾಪ್ತಿಯಲ್ಲಿ ಎಂದಿನಂತೆ ಅಂಗಡಿ ತೆರೆಯಲು ಮುಂದಾದ ವರ್ತಕರೊಂದಿಗೆ ವಾಗ್ವಾದ ನಡೆಸಿದ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು, ಅಂಗಡಿ ಬಂದ್ ಮಾಡುವಂತೆ ಪಟ್ಟುಹಿಡಿದರು. ಇದಕ್ಕೆ ಸ್ಪಂದಿಸದ ಹಿನ್ನೆಲೆ ಬಲವಂತವಾಗಿ ಮುಚ್ಚಿಸಲು ಯತ್ನಿಸಿದರು ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದ ದೃಶ್ಯ ಕಂಡುಬಂದಿತು.

ಬಂದ್ ಕುರಿತು ಪ್ರತಿಕ್ರಿಯಿಸಿದ ಮಂಡಿಪೇಟೆ ಸಂಘದ ಅಧ್ಯಕ್ಷ ದಿನೇಶ್, ಚಾಮರಾಜಪೇಟೆ ಬಂದ್‍ಗೆ ಕರೆ ಕೊಟ್ಟಿರುವ ದುಷ್ಕರ್ಮಿಗಳು ಇಂದು ಈದ್ಗಾ ಮೈದಾನದ ಸುತ್ತಮುತ್ತಲಿನ ನಾಲ್ಕೈದು ರಸ್ತೆಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ. ಅದನ್ನು ಹೊರತುಪಡಿಸಿ ಚಾಮರಾಜಪೇಟೆಯ ಎಲ್ಲ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿವೆ ಎಂದರು.

ನಮ್ಮ ಬಳಿಯೂ ಬೆಳಗ್ಗೆ ಕೆಲವರು ಬಂದು ಅಂಗಡಿಗಳನ್ನು ಮುಚ್ಚಿಸುವಂತೆ ಒತ್ತಾಯ ಮಾಡಿದರು. ಆದರೆ, ನಾವು ಅವರ ಬೆದರಿಕೆಗೆ ಜಗ್ಗಿಲ್ಲ. ನಾವೆಲ್ಲರೂ ಅಣ್ಣತಮ್ಮಂದಿರಂತೆ ಸಹಬಾಳ್ವೆ ನಡೆಸುತ್ತಿರುವಾಗ ಬಂದ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ನುಡಿದರು.

ನಾಗರಿಕ ಒಕ್ಕೂಟ ವೇದಿಕೆಯ ಕಾರ್ಯದರ್ಶಿ ರುಕ್ಮಾಂಗದ ಮಾತನಾಡಿ, ಇಂದು ಕರೆ ನೀಡಿರುವ ಬಂದ್‍ಗೆ ಬೆಳಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಮನವಿಗೆ ಜನ ಸ್ಪಂದಿಸಿದ್ದಾರೆ ಎಂದರು.

ಬಂದೋಬಸ್ತ್: ಬಂದ್ ಹಿನ್ನೆಲೆ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಒಟ್ಟು 8 ಸೆಕ್ಟರ್ ಹಾಗೂ 15 ಜಂಕ್ಷನ್‍ಗಳಾಗಿ ವಿಂಗಡಿಸಿರುವ ಪೊಲೀಸರು, ಸೆಕ್ಟರ್‍ಗಳಿಗೆ ಇನ್‍ಸ್ಪೆಕ್ಟರ್ ಉಸ್ತುವಾರಿ ನಿಯೋಜಿಸಲಾಗಿತ್ತು. ಪ್ರತಿ ಜಂಕ್ಷನ್‍ನಲ್ಲಿ ಪಿಎಸ್ಸೈ ಸೇರಿ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಜೊತೆಗೆ ಹೊಯ್ಸಳ ರೌಂಡ್ಸ್ ನಡೆಸಲಾಯಿತು.

ಪೊಲೀಸರೊಂದಿಗೆ ವಾಗ್ವಾದ..!

ಚಾಮರಾಜಪೇಟೆ ಮೈದಾನದ ಬಳಿ ನಾಗರಿಕರನ್ನು ತಡೆದ ಪೊಲೀಸರು, ಮೈದಾನದ ಒಳಗೆ ಬರಬೇಡಿ ಎಂದು ಜಾಗೃತಿ ಮೂಡಿಸಿದರು. ಆದರೆ, ಪ್ರತಿಭಟನಾಕಾರರು ಇದು ನಮ್ಮ ಮೈದಾನ, ಸಾರ್ವಜನಿಕರ ಮೈದಾನ, ನಾವ್ಯಾಕೆ ಹೊರಗೆ ಹೋಗಬೇಕು ಎಂದು ವಾಗ್ವಾದ ನಡೆಸಿದ ಪ್ರಸಂಗ ಜರುಗಿತು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮೈದಾನದಲ್ಲಿ ಇದ್ದವರನ್ನು ಹೊರಕಳುಹಿಸಿದರು.

ಬೇಡಿಕೆಗಳೇನು?

ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಬೇಕು. ಮೈದಾನವನ್ನು ಆಟದ ಮೈದಾನವನ್ನಾಗಿಯೇ ಉಳಿಸಬೇಕು. ಚಾಮರಾಜಪೇಟೆ ಮೈದಾನಕ್ಕೆ ಜಯಚಾಮರಾಜೇಂದ್ರ ಮೈದಾನ ಎಂದು ನಾಮಕರಣ ಮಾಡಬೇಕು. ಯಾವುದೇ ಕಾರಣಕ್ಕೂ ವಕ್ಫ್ ಬೋರ್ಡ್‍ಗೆ ವಹಿಸಬಾರದು. ಮೈದಾನ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಡಲು ಸಮಿತಿ ರಚಿಸಬೇಕು.

ಮುಖಂಡರು ಪೊಲೀಸ್ ವಶಕ್ಕೆ

ಈದ್ಗಾ ಮೈದಾನ ಪ್ರವೇಶಕ್ಕೆ ಮುಂದಾದ ವೇಳೆ ಶ್ರೀರಾಮಸೇನೆ ಬೆಂಗಳೂರು ಅಧ್ಯಕ್ಷ ಚಂದ್ರಶೇಖರ್, ನಾಗರಿಕ ವೇದಿಕೆಯ ಕೆಲ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.

ಬಂದ್ ಬೆಂಬಲಿಸದ ಐಯ್ಯಂಗಾರ್ ಬೇಕರಿ

ಈದ್ಗಾ ಮೈದಾನ ಸಂಬಂಧ ಹಿಂದುತ್ವ ಸಂಘಟನೆಗಳು ಕರೆ ನೀಡಿದ್ದ ಬಂದ್‍ಗೆ ಯಾವುದೇ ಬೆಂಬಲ ನೀಡದೆ, ವರ್ತಕರು ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದ ದೃಶ್ಯ ಕಂಡಿತು. ಚಾಮರಾಜಪೇಟೆಯ ಶಂಕರಮಠದ ಮುಖ್ಯರಸ್ತೆಯಲ್ಲಿರುವ ಹೆಸರಾಂತ ಐಯ್ಯಂಗಾರ್ ಬೇಕರಿಯಲ್ಲಿಯೂ ಗ್ರಾಹಕರು ಎಂದಿನಂತೆ ವ್ಯಾಪಾರದಲ್ಲಿ ನಿರತರಾಗಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News