ಬಿಜೆಪಿ ಸರಕಾರದ ಆಡಳಿತದಲ್ಲಿ ಪರಿಶಿಷ್ಟರು ಅನಾಥ ಶಿಶುಗಳು: ಧ್ರುವನಾರಾಯಣ್

Update: 2022-07-12 13:56 GMT

ಬೆಂಗಳೂರು, ಜು. 12: ‘ಬಿಜೆಪಿ ಸರಕಾರದ ಅವಧಿಯಲ್ಲಿ ಎಸ್ಸಿ-ಎಸ್ಟಿ ವರ್ಗದವರಿಗೆ ನಿರಂತರ ಅನ್ಯಾಯವಾಗುತ್ತಿದ್ದು, ದಲಿತರು ಅನಾಥ ಶಿಶುಗಳಂತಾಗಿದ್ದಾರೆ. ಸರಕಾರದಿಂದ ಎಸ್ಸಿ-ಎಸ್ಟಿಗಳಿಗೆ ಅನ್ಯಾಯ ಆಗುತ್ತಿದ್ದರೂ ಬಿಜೆಪಿಯ ದಲಿತ ನಾಯಕರು ಈ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿಲ್ಲ ಏಕೆ? ಇಂತಹವರಿಗೆ ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕತೆ ಇದೆಯೇ?’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಮಂಗಳವಾರ ಇಲ್ಲಿನ ಕ್ವೀನ್ಸ್‍ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತರು, ಪರಿಶಿಷ್ಟರ ಹಿತಾಸಕ್ತಿ ಬಗ್ಗೆ ಗಮನವಹಿಸದೆ ನಿರ್ಲಕ್ಷ ವಹಿಸಿದೆ. ಆ ಮೂಲಕ ಈ ವರ್ಗದವರನ್ನು ಅನಾಥ ಶಿಶುಗಳಾಗಿ ಮಾಡಿದ್ದಾರೆ. ಬಿಜೆಪಿಯಲ್ಲಿರುವ ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿದ ನಾಯಕರು, ಶಾಸಕರು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಾ, ತಮಗೆ ತಾವೇ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ' ಎಂದು ದೂರಿದರು.

‘ಪ್ರತಿಯೊಬ್ಬ ವ್ಯಕ್ತಿಗೂ ಸ್ವಾಭಿಮಾನ ಇರಬೇಕು. ಸ್ವಾಭಿಮಾನ ಇಲ್ಲದವನ ಬದುಕು ಶೂನ್ಯ ಎಂದು ಅಂಬೇಡ್ಕರ್ ಹೇಳುತ್ತಾರೆ. ಈ ರೀತಿ ಬಿಜೆಪಿಯ ದಲಿತ ನಾಯಕರು ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಉದಾಹರಣೆ ಛಲವಾದಿ ನಾರಾಯಣಸ್ವಾಮಿ ಕೈಯಲ್ಲಿ ಚಡ್ಡಿ ಹೊರಿಸಿದ್ದಾರೆ. ಅವರಿಗೆ ದಲಿತರು, ಶೋಷಿತರ ಬಗ್ಗೆ ಕಾಳಜಿ ಇದ್ದರೆ ಈ ಸರಕಾರದ ಅನ್ಯಾಯದ ವಿರುದ್ಧ ಹೋರಾಡಬೇಕಿತ್ತು' ಎಂದು ಅವರು ತಿಳಿಸಿದರು.

ಬಜೆಟ್‍ನಲ್ಲಿ ಪರಿಶಿಷ್ಟರಿಗೆ ಅತ್ಯಂತ ಕಡಿಮೆ ಅನುದಾನ ನೀಡಲಾಗಿದೆ. ಈ ಅನ್ಯಾಯದ ಬಗ್ಗೆ ಸೊಲ್ಲೆತ್ತದ ಬಿಜೆಪಿಯ ದಲಿತ ಮಂತ್ರಿ ಹಾಗೂ ಶಾಸಕರಿಗೆ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವ ಯಾವ ನೈತಿಕತೆ ಇದೆ. ನಿಮಗೆ ತಾಕತ್ತಿದ್ದರೆ ಪರಿಶಿಷ್ಟರ ಕಲ್ಯಾಣಕ್ಕೆ ಅನುದಾನ ಬಿಡುಗಡೆ ಮಾಡಿ. ಅನುದಾನ ಕಡಿಮೆ ಮಾಡಿದರೂ ಬಾಯಿಬಿಚ್ಚದೆ ಅವರ ಕೈಗೊಂಬೆಯಾಗಿದ್ದೀರಿ. ಎಸ್ಸಿಪಿ-ಟಿಎಸ್ಪಿ ಕಾಯ್ದೆ ಅಡಿಯಲ್ಲಿ ಕೊಟ್ಟಿರುವ ಅನುದಾನವನ್ನು ಬೇರೆ ಕೆಲಸಗಳಿಗೆ ಬಳಸಿಕೊಂಡಿದ್ದಾರೆ. ಸುಮಾರು 7ಸಾವಿರ ಕೋಟಿ ರೂ. ಹಣವನ್ನು ಬೇರೆ ಕೆಲಸಗಳಿಗೆ ವರ್ಗಾಯಿಸಲಾಗಿದೆ' ಎಂದು ಅವರು ದೂರಿದರು.

ಸರಕಾರ ವಿಫಲ: ‘ನ್ಯಾ.ನಾಗಮೋಹನ್ ದಾಸ್ ಅವರ ವರದಿ ಬಂದಿದ್ದಾಗ, ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ 24 ತಾಸುಗಳಲ್ಲಿ ಈ ವರದಿ ಜಾರಿಗೆ ತರಲಾಗುವುದು. ಇದನ್ನು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ದರು. ಆದರೆ ಶ್ರೀರಾಮುಲು ಅವರು ಎಲ್ಲಿದ್ದಾರೆ? ಸ್ವಾಮೀಜಿಗಳು ಹಲವು ತಿಂಗಳಿನಿಂದ ಹೋರಾಟ ಮಾಡುತ್ತಿದ್ದಾರೆ. ಸರಕಾರ ಶೇ.24.1ರಷ್ಟು ಅನುದಾನ ನೀಡುವುದರಲ್ಲೂ ವಿಫಲವಾಗಿದ್ದು, ಮೀಸಲಾತಿ ಜಾರಿಗೆ ತರುವ ವಿಚಾರದಲ್ಲೂ ಸರಕಾರ ವಿಫಲವಾಗಿದೆ. ಹೀಗಾಗಿ ಕೂಡಲೇ ಈ ವರದಿ ಜಾರಿಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಸಿದ್ದರಾಮಯ್ಯ-75 ಅಮೃತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲು ಸಮಿತಿ ರಚನೆ ಮಾಡಿದ್ದು, ಈ ಸಮಿತಿಯಲ್ಲಿ ಇರುವವರೆಲ್ಲರೂ ಕಾಂಗ್ರೆಸಿಗರೇ. ಇದುವರೆಗೂ ಕೆಪಿಸಿಸಿಯಿಂದ ಯಾವುದೇ ನಾಯಕ ಜನ್ಮದಿನ ಹಮ್ಮಿಕೊಂಡಿಲ್ಲ. ಆದರೆ, ಸಿದ್ದರಾಮಯ್ಯ ನಮ್ಮ ನಾಯಕರಿಗೆ ಅವರ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದು, ನಾವೆಲ್ಲರೂ ಅಭಿಮಾನದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಸಿದ್ದರಾಮಯ್ಯ ನಮ್ಮ ಪ್ರಬಲ ನಾಯಕರಾಗಿದ್ದು. ಅವರ 75ನೆ ಜನ್ಮದಿನವನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ. ಬಿಜೆಪಿಯವರು ಮೊದಲು ತಮ್ಮ ಮನೆಯ ಸ್ಥಿತಿ ನೋಡಿಕೊಳ್ಳಲಿ'

-ಆರ್.ಧ್ರುವನಾರಾಯಣ್ ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News