×
Ad

ಉಳ್ಳಾಲ; ಕಡಲ್ಕೊರೆತದಿಂದ ಅಪಾರ ಹಾನಿ ಸಂಭವಿಸಿದ ಬಟ್ಟಂಪಾಡಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

Update: 2022-07-12 21:53 IST

ಉಳ್ಳಾಲ; ತೀವ್ರ ಕಡಲ್ಕೊರೆತದಿಂದ ಅಪಾರ ಹಾನಿ ಸಂಭವಿಸಿದ ಸೋಮೇಶ್ವರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಟ್ಟಂಪಾಡಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಸರಗೋಡಿನ ನೆಲ್ಲಿಕುನ್ನು ಮಾದರಿಯ ಸೀವೇವ್ ಬ್ರೇಕರ್ಸ್ ತಂತ್ರಜ್ಞಾನವನ್ನು ಇಲ್ಲೂ ಅಳವಡಿಸುವುದಾಗಿ ಹೇಳಿದರು.

ಬೆಟ್ಟಂಪಾಡಿ ಕಡಲ್ಕೊರೆತದಿಂದ ತೀವ್ರ ಹಾನಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬಟ್ಪಂಪಾಡಿಯಲ್ಲಿ ರಸ್ತೆ ಸಹಿತ ಮನೆ ಕೂಡಾ ಸಮುದ್ರ ಪಾಲಾಗಿದ್ದು ತಿಳಿದು ಪರಿಶೀಲನೆಗಾಗಿ ಬಂದಿದ್ದೇನೆ. ಕಡಲ್ಕೊರೆತ ತಡೆಗಟ್ಟಲು ಮಾಡಲಾದ ಎಡಿಬಿ ಕಾಮಗಾರಿ ವ್ಯರ್ಥ ಆಗಿದೆ. ಹಾಕಿದ ಕಲ್ಲು ಸಮುದ್ರ ಪಾಲಾಗಿದೆ ಎಂಬ ಆರೋಪ ಇದೆ. ಇನ್ನು ಈ ಕಡಲ್ಕೊರೆತ ತಡೆಗಟ್ಟಲು ತಜ್ಞರಿಂದ ಪರಿಶೀಲನೆ ನಡೆಸಿ ಅವರಿಂದ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಈಗಾಗಲೇ ಹಾನಿಯಾದ ಮನೆಗಳಿಗೆ ಪರಿಹಾರ ಒದಗಿಸಲು ನಿರ್ಧರಿಸಲಾಗಿದೆ. 30 ಮೀನುಗಾರರ ಮನೆ ಪರಿಶೀಲನೆ ನಡೆಸಿ ತೊಂದರೆಗೊಳಗಾದ ಕುಟುಂಬವನ್ನು ಶೀಘ್ರ ಸ್ಥಳಾಂತರ ಮಾಡಬೇಕು. ಆಗಷ್ಟ್ ತಿಂಗಳಲ್ಲಿ ಮತ್ತೆ ಮಳೆ ಬರುತ್ತದೆ. ಈ ವೇಳೆ ಕಡಲ್ಕೊರೆತ ತೀವ್ರಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಕಡಲ್ಕೊರೆತ ಪ್ರದೇಶಗಳನ್ನು  ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ. ಈ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದೇನೆ ಎಂದು ಸಿಎಂ ಹೇಳಿದರು.

ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿರುವ ಹಾನಿ ನೋಡಿದ್ದೇನೆ. ದಕ್ಷಿಣ ಕನ್ನಡದ ಸುಳ್ಯದಲ್ಲಿ ಭೂ ಕಂಪನದಿಂದ ಹಾನಿಯಾದ ಮನೆಗಳಿಗೆ ಭೇಟಿ ಕೊಟ್ಟಿದ್ದೇನೆ. ಭೂ ಕಂಪನದಿಂದ ಎಫೆಕ್ಟ್ ತುಂಬಾ ಆಗಿದೆ. ಉಪ್ಪಿನಂಗಡಿಯಲ್ಲಿ ನದಿಗಳ ಸಂಗಮ ಪ್ರದೇಶದಲ್ಲಿ ತೋಟಗಳಿಗೆ ಹಾನಿ ಆಗಿದೆ. ಭೂ ಕಂಪನದ ಬಗ್ಗೆ ಅಧ್ಯಯನಕ್ಕೆ ಮೂರು, ನಾಲ್ಕು ಸಂಸ್ಥೆಗೆ ಹೇಳಿದ್ದೇವೆ. ಅವರು ಅಧ್ಯಯನ ಮಾಡಿ‌ ಸಲಹೆ ನೀಡಿದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಕಡಲ್ಕೊರೆತ ಸಂತ್ರಸ್ತರ ಅಹವಾಲು ಆಲಿಸಿದ ಸಿ.ಎಂ ಶಾಶ್ವತ ಪರಿಹಾರದ ಭರವಸೆ ನೀಡಿದರು. ಶಾಸಕ ಯು.ಟಿ.ಖಾದರ್ ರಿಂದ ಸಮಸ್ಯೆ ಬಗ್ಗೆ ವಿವರಣೆ ಪಡೆದ ಸಿ.ಎಂ, ಸಮಸ್ಯೆ ಆಲಿಸಿ ನೇರವಾಗಿ ಉಡುಪಿಗೆ ತೆರಳಿದರು.

ಈ ಸಂದರ್ಭ ಕಂದಾಯ ಸಚಿವರಾದ ಆರ್‌. ಅಶೋಕ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಶಾಸಕರಾದ ಯು.ಟಿ.ಖಾದರ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News