ಮಾಜಿ ಸಿಎಂ ಬಿಎಸ್‍ವೈ ಭೇಟಿಯಾದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

Update: 2022-07-13 12:57 GMT

ಬೆಂಗಳೂರು, ಜು.13: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಬುಧವಾರ ನಗರದಲ್ಲಿರುವ ಯಡಿಯೂರಪ್ಪ ಅವರ ಸರಕಾರಿ ನಿವಾಸ ಕಾವೇರಿಗೆ ತಮ್ಮ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರೊಂದಿಗೆ ಆಗಮಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಕೆಲಕಾಲ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಸಮುದಾಯದ ಹಿರಿಯರು. ಸೌಹಾರ್ದಯುತವಾಗಿ ಅವರನ್ನು ಭೇಟಿ ಮಾಡಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.

ನಾನು ಬೆಂಗಳೂರಿಗೆ ಬಂದಾಗ ಸಹಜವಾಗಿಯೆ ಯಡಿಯೂರಪ್ಪರನ್ನು ಭೇಟಿಯಾಗುತ್ತಿರುತ್ತೇನೆ. ಇದರಲ್ಲಿ ಕುತೂಹಲದ ವಿಚಾರ ಏನಿಲ್ಲ. ಇವತ್ತು ಗುರುಪೂರ್ಣಿಮಾ. ಹಾಗಾಗಿ, ನಮ್ಮ ಸಮಾಜದ ಹಿರಿಯರಾಗಿರುವ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಅವರೊಂದಿಗೆ ಯಾವುದೆ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಅವರು ಹೇಳಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕೆಂದು ಆಸಕ್ತಿ ಹೊಂದಿದ್ದರು. ಆದರೆ, ಕೆಲವು ಕಾರಣಗಳಿಂದ ಕೊಡಲು ಆಗಲಿಲ್ಲ. ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೂ ನಮಗೆ ಭರವಸೆ ಇದ್ದು, ಎಲ್ಲ ಅಡೆತಡೆಗಳನ್ನು ನಿವಾರಿಸಿ ಅವರು ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡುತ್ತಾರೆ ಅನ್ನೋ ನಂಬಿಕೆ ಇದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ದಾವಣಗೆರೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಸಿದ್ದರಾಮೋತ್ಸವ ಮಾದರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲಿಗರು ‘ಡಿಕೆಶಿ ಉತ್ಸವ’ ಮಾಡಬೇಕೆಂದು ಆಗ್ರಹಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಉತ್ಸವ ಕುರಿತು ನನಗೆ ಯಾವುದೆ ಮಾಹಿತಿ ಇಲ್ಲ ಎಂದರು.

ಸಿದ್ದರಾಮಯ್ಯನವರ 75ನೆ ಹುಟ್ಟುಹಬ್ಬದ ಅಂಗವಾಗಿ ಆಚರಿಸುತ್ತಿರುವ ಸಿದ್ದರಾಮೋತ್ಸವವನ್ನು ನಾವೆಲ್ಲ ಸೇರಿ ಮಾಡುತ್ತಿದ್ದೇವೆ. ಉತ್ಸವದ ಸಮಿತಿಯಲ್ಲಿ ನಾನೂ ಇದ್ದೇನೆ. ಸಿದ್ದರಾಮಯ್ಯ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಜನರ ಸೇವೆ ಮಾಡಿದ್ದಾರೆ. ತನಗಾಗಿ ಉತ್ಸವ ಮಾಡಿ ಎಂದು ಅವರು ಯಾರನ್ನೂ ಕೇಳಿಲ್ಲ. ನಾವೆಲ್ಲ ಸೇರಿ ಈ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News