ಆರೆಸ್ಸೆಸ್ ನಂತೆ ಪಿಎಫ್‌ಐ ತರಬೇತಿ ಕೊಡುತ್ತದೆ ಎಂದ ಪಾಟ್ನಾ ಎಸ್ ಎಸ್ ಪಿ: ಬಿಜೆಪಿ ಆಕ್ರೋಶ

Update: 2022-07-14 15:01 GMT
Photo: Twitter

ಪಾಟ್ನಾ:   ಪಿಎಫ್‌ಐ ಆರ್‌ಎಸ್‌ಎಸ್ ಶಾಖಾಗಳಂತೆ ಯುವಕರಿಗೆ ಸಮರ ಕಲೆಗಳಲ್ಲಿ ತರಬೇತಿ ನೀಡುತ್ತದೆ ಎಂದು  ಪಾಟ್ನಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಿಜೆಪಿ - ಜೆಡಿಯು ಮೈತ್ರಿಕೂಟ ಆಡಳಿತದ ರಾಜ್ಯದಲ್ಲಿ ಈ ಹೇಳಿಕೆ ಬಿಜೆಪಿ, ಸಂಘ ಪರಿವಾರದ  ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಪಾಟ್ನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮಾನವಜಿತ್ ಸಿಂಗ್ ಧಿಲ್ಲೋನ್ ಅವರು ಗುರುವಾರ ಮಧ್ಯಾಹ್ನ ಮಾಧ್ಯಮಗೋಷ್ಠಿಯಲ್ಲಿ ಈ ಹೇಳಿಕೆ ನೀಡಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

“ಸಂಸ್ಥೆಯು ಯುವಕರನ್ನು ಸಜ್ಜುಗೊಳಿಸಲು ಮಸೀದಿಗಳು ಮತ್ತು ಮದರಸಾಗಳಲ್ಲಿ ಕೆಲಸ ಮಾಡಿದೆ. ಅದರ ಕಾರ್ಯವಿಧಾನವು ಆರೆಸ್ಸೆಸ್ ಶಾಖೆಗಳ ಕಾರ್ಯ ವಿಧಾನದಂತೆಯೇ ಇತ್ತು. ಅದು ದೈಹಿಕ ಶಿಕ್ಷಣದ ನೆಪದಲ್ಲಿ ಯುವಕರಿಗೆ ತರಬೇತಿ ನೀಡುತ್ತದೆ, ಮತ್ತು ಅಜೆಂಡಾವನ್ನು ಹರಡುತ್ತದೆ. ಸಮರ ಕಲೆಗಳನ್ನು ಕಲಿಸುವ ಸೋಗಿನಲ್ಲಿ ಕೋಲುಗಳು ಮತ್ತು ಕತ್ತಿಗಳನ್ನು ಬಳಸಲು ಸದಸ್ಯರಿಗೆ ತರಬೇತಿ ನೀಡುವ ಬಗ್ಗೆ ನಮಗೆ ದಾಖಲೆಗಳು ದೊರೆತಿವೆ. ಬ್ರೈನ್ ವಾಶ್ ಮಾಡಲು ಮತ್ತು ಜನರನ್ನು ಸಜ್ಜುಗೊಳಿಸಲು ಬಳಸುತ್ತಿದ್ದ ದಾಖಲೆಗಳೂ ದೊರೆತಿವೆ ”ಎಂದು ಅವರು ಹೇಳಿದ್ದಾರೆ ಎಂದು indiatoday.in ವರದಿ ಮಾಡಿದೆ.

ಪೊಲೀಸ್ ಅಧಿಕಾರಿಯ ಈ  ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ  ವ್ಯಕ್ತಪಡಿಸಿದ್ದು, ಎಸ್‌ಎಸ್‌ಪಿ ಪಿಎಫ್‌ಐ ವಕ್ತಾರರಂತೆ ಮಾತನಾಡಿದ್ದಾರೆ ಎಂದು  ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಧಿಲ್ಲೋನ್ ಅವರನ್ನು ಎಸ್‌ಎಸ್‌ಪಿ ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿದೆ.

ಬಿಜೆಪಿ ಶಾಸಕ ಹರೀಶ್ ಭೂಷಣ್ ಠಾಕೂರ್ ಅವರು  ಆರ್‌ಎಸ್‌ಎಸ್‌ನೊಂದಿಗೆ ಪಿಎಫ್‌ಐ ಅನ್ನು ಹೋಲಿಸಿದ್ದಕ್ಕಾಗಿ ಎಸ್‌ಎಸ್‌ಪಿಯದ್ದು  'ಮಾನಸಿಕ ದಿವಾಳಿತನʼ ಎಂದು ಕರೆದಿದ್ದಾರೆ. ಎಸ್‌ಎಸ್‌ಪಿ ಅವರ ಹೇಳಿಕೆಯು ಅವರ ಮಾನಸಿಕ ದಿವಾಳಿತನಕ್ಕೆ ಪುರಾವೆಯಾಗಿದೆ ಎಂದು ಹೇಳಿದ ಠಾಕೂರ್ ಅವರು ಧಿಲ್ಲೋನ್‌ ತಕ್ಷಣ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಕ್ಷಮೆ ಯಾಚಿಸದಿದ್ದರೆ ಅಧಿಕಾರಿಯನ್ನು ವಜಾ ಮಾಡಬೇಕು ಎಂದಿದ್ದಾರೆ. 

 ವಿರೋಧ ಪಕ್ಷ  ಆರ್‌ಜೆಡಿ ಎಸ್‌ಎಸ್‌ಪಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದೆ: “ಈ ಜನರು ದೈಹಿಕ ತರಬೇತಿಯ ಹೆಸರಿನಲ್ಲಿ ತಮ್ಮ ಪ್ರಚಾರ ಮತ್ತು ದ್ವೇಷವನ್ನು ಹರಡುತ್ತಾರೆ ಎಂದು ಸಂಘದ ಕಾರ್ಯವೈಖರಿಯ ಬಗ್ಗೆ ಪಾಟ್ನಾದ ಹಿರಿಯ ಪೊಲೀಸ್ ಅಧೀಕ್ಷಕರು ಸರಿಯಾಗಿ ಹೇಳಿದ್ದಾರೆ!   ಕೆಲವು ಪ್ರದೇಶಗಳಲ್ಲಿ, ಅವರು ಗಲಭೆಗಳು, ಗುಂಪು ಹತ್ಯೆಗಳು ಮತ್ತು ಇತರ ಸಾಮಾಜಿಕ ಸಾಮರಸ್ಯದ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಾರೆʼ ಎಂದು ಟ್ವೀಟ್‌ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News