ಬೆಂಗಳೂರು | GST ವಿರೋಧಿಸಿ ಮಾರುಕಟ್ಟೆಗಳು ಬಂದ್: ವ್ಯಾಪಾರ ವಹಿವಾಟು ಸ್ಥಗಿತ
ಬೆಂಗಳೂರು, ಜು.15: ಕೇಂದ್ರ ಸರಕಾರವು ಆಹಾರ ಧಾನ್ಯಗಳ ಮೇಲೆ ಶೇ.5ರಷ್ಟು ಸರಕು ಮತ್ತು ಸೇವಾ ತೆರಿಗೆ (GST ) ವಿಧಿಸಿರುವುದನ್ನು ವಿರೋಧಿಸಿ ಬೆಂಗಳೂರಿನ ಹಲವು ಮಾರುಕಟ್ಟೆಗಳಲ್ಲಿ ವ್ಯಾಪಾರ ವಾಹಿವಾಟು ಬಂದ್ ಮಾಡಲಾಗಿತ್ತು.
ಶುಕ್ರವಾರ ನಗರದ ಯಶವಂತಪುರ ಎಪಿಎಂಸಿ ಯಾರ್ಡ್, ನ್ಯೂತರಗುಪೇಟೆ ಸೇರಿದಂತೆ ನಾನಾ ಮಾರುಕಟ್ಟೆಗಳನ್ನು ಇಡೀ ದಿನ ಬಂದ್ ಮಾಡಿ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಸಲಾಗಿತ್ತು.
ಒಂದು ಸಾವಿರಕ್ಕೂ ಹೆಚ್ಚು ಅಕ್ಕಿ ಗಿರಣಿಗಳು, ಹಿಟ್ಟಿನ ಗಿರಣಿಗಳೂ ಸೇರಿದಂತೆ ಹಲವಾರು ಚಟುವಟಿಕೆಗಳು ಸ್ಥಗಿತಗೊಳಿಸಲಾಗಿದ್ದು, ಯಶವಂತಪುರ ಎಪಿಎಂಸಿಯ ವರ್ತಕರು, ಕಾರ್ಮಿಕ ಸಂಘಟನೆಗಳು ಬಂದ್‍ಗೆ ಬೆಂಬಲ ಘೋಷಿಸಿದ್ದರಿಂದ ವ್ಯಾಪಾರ ವಹಿವಾಟು ಬಂಧ್ ಆಗಿತ್ತು.
ಇಲ್ಲಿನ ಯಶವಂತಪುರ ಮಾರುಕಟ್ಟೆ ಒಳ ಮತ್ತು ಹೊರ ಆವರಣದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಾರಾಟ ಮಳಿಗೆಗಳಿದ್ದು, ದಿನ ಪ್ರತಿ ಅಂದಾಜು 50 ಕೋಟಿ ರೂ.ಗೂ ಹೆಚ್ಚು ವ್ಯಾಪಾರ ನಡೆಯುತ್ತದೆ. ಆದರೆ, ಬಂದ್ ಕರೆ ಕೊಟ್ಟ ಹಿನ್ನೆಲೆ ವ್ಯಾಪಾರ ವಹಿವಾಟು ನಿಂತಿದ್ದು, ನಷ್ಟವೂ ಕಂಡುಬಂದಿತು.
ಈ ಕುರಿತು ಪ್ರತಿಕ್ರಿಯಿಸಿದ ವರ್ತಕರು, ಕೇಂದ್ರ ಸರಕಾರದ ಅಧೀನದಲ್ಲಿರುವ ಜಿಎಸ್ಟಿ ಮಂಡಳಿಯು ಆಹಾರ ಧಾನ್ಯಗಳ ಮೇಲೆ ವಿಧಿಸಿರುವ ಶೇ.5ರ ಜಿಎಸ್ಟಿ ತೆರಿಗೆಯು ಜು.18ರಿಂದ ಜಾರಿಗೆ ಬರಲಿದೆ. ಈ ತೆರಿಗೆಯಿಂದ ಅಕ್ಕಿ, ಜೋಳ, ರಾಗಿಯಂಥ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ. ಈಗಾಗಲೇ ಹಣದುಬ್ಬರದಿಂದ ಕಂಗಾಲಾಗಿರುವ ಕಾರ್ಮಿಕರು, ಬಡವರು, ಮಧ್ಯಮವರ್ಗದ ಜನರು ಹೊಸ ಹೊರೆಯನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ತೆರಿಗೆ ಹೇರುವ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬೆಂಬಲ: ಅಕ್ಕಿ ಗಿರಣಿದಾರರ ಸಂಘದ ಪ್ರತಿಭಟನೆಗೆ ದಿ ಬೆಂಗಳೂರು ಹೋಲ್‍ಸೇಲ್ ಫುಡ್‍ಗ್ರೇನ್ಸ್ ಆ್ಯಂಡ್ ಪಲ್ಸಸ್(ಮಚೆರ್ಂಟ್ಸ್ ಅಸೋಸಿಯೇಷನ್), ಬೆಂಗಳೂರು ಗ್ರೇನ್ಸ್ ಮಚೆರ್ಂಟ್ಸ್ ಅಸೋಸಿಯೇಷನ್, ಕರ್ನಾಟಕ ರೂರಲ್ ಫ್ಲೋರ್‍ಮಿಲ್ಲರ್ಸ್ ಅಸೋಸಿಯೇಷನ್, ನ್ಯೂತರಗುಪೇಟೆ ಮಚೆರ್ಂಟ್ಸ್ ಅಸೋಸಿಯೇಷನ್ ಸಂಘಟನೆಗಳು ಬೆಂಬಲ ನೀಡಿದ್ದವು.
ಹಣದುಬ್ಬರ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗಿರುವ ಅಗತ್ಯ ಆಹಾರ ವಸ್ತುಗಳ ಮೇಲೆ ಶೇ.5ರಷ್ಟು ಜಿಎಸ್ಟಿ ವಿಧಿಸುವ ಕ್ರಮವನ್ನು ವಿರೋಧಿಸಿ ಸಂಘದ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿದೆ ಎಂದು ದಿ ನ್ಯೂತರಗುಪೇಟೆ ಮಚೆರ್ಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಪಿ.ದಿನೇಶ್ ತಿಳಿಸಿದರು.