×
Ad

ಜು.19ರಂದು ಚೆಸ್ ಒಲಿಂಪಿಯಾಡ್ ಟಾರ್ಚ್ ಲೈಟ್ ಜಾಥಾ

Update: 2022-07-16 22:21 IST

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ  ಹಾಗೂ ನೆಹರು ಯುವ ಕೇಂದ್ರ ಮಂಗಳೂರು ವತಿಯಿಂದ ೪೪ನೆಯ ಚೆಸ್ ಒಲಿಂಪಿಯಾಡ್ ನ ರಿಲೇ ಜ್ಯೋತಿಯ ಸ್ವಾಗತ ಸಮಾರಂಭ ಜು.೧೯ರಂದು ಬೆಳಗ್ಗೆ ೮ ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನೆಹರೂ ಯುವ ಕೇಂದ್ರದ ಜಿಲ್ಲಾ ಯೂತ್ ಆಫೀಸರ್ ರಘುವೀರ್ ಸೂಟರ್ ಪೇಟೆ, ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸುವರು. ಸಂಸದ ನಳಿನ್ ಕುಮಾರ್ ಕಟೀಲ್,  ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತರಿರುವರು ಎಂದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಬೆಳಗ್ಗೆ ೭ ಗಂಟೆಯಿಂದ ನಗರದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಬೈಕ್ ಮತ್ತು ಕಾರು ಜಾಥಾವು ಲೇಡಿಹಿಲ್, ಬಳ್ಳಾಲ್‌ಬಾಗ್, ಪಿ.ವಿ.ಎಸ್. ನವಭಾರತ್ ಸರ್ಕಲ್, ಹಂಪನಕಟ್ಟಾ ಮಾರ್ಗವಾಗಿ ಕುದ್ಮುಲ್ ರಂಗರಾವ್ ಪುರಭವನಕ್ಕೆ ಆಗಮಿಸಲಿದೆ. ಬಳಿಕ  ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಚೆಸ್ ಆಟವನ್ನು ಉತ್ತೇಜಿಸಲು ಭಾರತವು ೪೩ನೇ ಚೆಸ್  ಒಲಿಂಪಿಯಾಡ್‌ನ್ನು ಆಯೋಜಿಸುತ್ತಿದೆ. ೧೯೨೭ ರಿಂದ ಆಯೋಜಿಸಲಾಗುತ್ತಿರುವ ಪ್ರತಿಷ್ಠಿತ ಸ್ಪರ್ಧೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಮತ್ತು ೩೦ ವರ್ಷಗಳ ನಂತರ ಏಷ್ಯಾದಲ್ಲಿ ಆಯೋಜಿಸಲಾಗುತ್ತಿದೆ. ೧೮೯ ದೇಶಗಳು ಭಾಗವಹಿಸುವ ಮೂಲಕ, ಇದು ಯಾವುದೇ ಚೆಸ್ ಒಲಂಪಿಯಾಡ್‌ನಲ್ಲಿ ಅತಿದೊಡ್ಡ ಭಾಗವಹಿಸುವಿಕೆಯಾಗಿದೆ ಎಂದರು.

ಭಾರತದ ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ಹಾಗೂ ಕೆಲವೇ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಒಟ್ಟು ದೇಶದ ೭೫ ಕೇಂದ್ರಗಳಲ್ಲಿ ೪೪ನೇ ಚೆಸ್ ಒಲಿಂಪಿಯಾಡ್  ಟಾರ್ಚ್ ಲೈಟ್ ಸಂಚರಿಸಲಿದೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮಾತ್ರ ಈ ಸುವರ್ಣವಕಾಶ ದೊರೆತಿದೆ. ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ, ನೆಹರು ಯುವ ಕೇಂದ್ರ, ಮಂಗಳೂರು ಎನ್‌ಎಸ್‌ಎಸ್, ಎನ್‌ಸಿಸಿ ಚೆಸ್ ಫೆಡರೇಶನ್,  ಯುವ ಮಂಡಳಗಳು,  ಮಂಗಳೂರು ಸರ್ಫ್ ಕ್ಲಬ್ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆಯಲಿದೆ ಎಂದು ರಘುವೀರ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಚೆಸ್ ಫೆಡರೇಷನ್ ಅಧ್ಯಕ್ಷ ರಮೇಶ್ ಕೋಟೆ, ಪ್ರಮುಖರಾದ ಅಭಿಷೇಕ್, ನಿಖಿಲ್, ಡಾ.ಅಶ್ವಿನಿ ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News