×
Ad

ಬೆಂಗಳೂರು | ಯುವತಿಗೆ ಕಿರುಕುಳ ಆರೋಪ: ಬಾಲಕನನ್ನು ಥಳಿಸಿ ಕೊಂದ ದುಷ್ಕರ್ಮಿಗಳು

Update: 2022-07-17 17:53 IST

ಬೆಂಗಳೂರು, ಜು.17: ಯುವತಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ಅಪ್ರಾಪ್ತನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರನ್ನು ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ ನಿವಾಸಿ ಪ್ರಜ್ವಲ್ (17)ನನ್ನು ಕೊಲೆಗೈದ ಆರೋಪದಡಿ ನಾಗೇಂದ್ರ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಬನಶಂಕರಿಯಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಪ್ರಜ್ವಲ್ ದೂರದ ಸಂಬಂಧಿ ನಾಗೇಂದ್ರ ಅವರ ಸಹೋದರನ ಪುತ್ರಿಗೆ ಕರೆ ಮಾಡಿ, ಪ್ರೀತಿಸುವಂತೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಈ ವಿಚಾರವನ್ನು ಯುವತಿ ತನ್ನ ಪಾಲಕರಿಗೆ ಹೇಳಿದ್ದು ಇದರಿಂದ ಕೆರಳಿದ ಯುವತಿಯ ಸಂಬಂಧಿ ನಾಗೇಂದ್ರ ಮತ್ತು ಆತನ ನಾಲ್ವರು ಸಹಚರರು, ಜು.15ರ ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ನಿರ್ಜನ ಪ್ರದೇಶಕ್ಕೆ ಮಾತನಾಡಬೇಕೆಂದು ಪ್ರಜ್ವಲ್‍ನನ್ನು ಕರೆಸಿಕೊಂಡಿದ್ದರು. ಬಳಿಕ ಎಚ್ಚರಿಕೆ ನೀಡುವ ಭರದಲ್ಲಿ ದೊಣ್ಣೆಯಿಂದ ಪ್ರಜ್ವಲ್ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ.

ಇದರಿಂದ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಬಾಲಕನನ್ನು ಆರೋಪಿಗಳೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News