ಜಯದೇವ ಸಂಸ್ಥೆ ನಿರ್ದೇಶಕರಾಗಿ ಡಾ.ಮಂಜುನಾಥ್ ಸೇವಾವಧಿ ವಿಸ್ತರಣೆ
ಬೆಂಗಳೂರು, ಜು.18: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್ ಅವರ ಸೇವಾವಧಿಯನ್ನು ಮುಂದಿನ 1 ವರ್ಷದವರೆಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಡಾ.ಮಂಜುನಾಥ್ ಅವರ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸ್ಥಾನದ ಅಧಿಕಾರ ಅವಧಿ ಇಂದಿಗೆ(ಸೋಮವಾರ) ಮುಕ್ತಾಯವಾಗುತ್ತಿತ್ತು. ಆದರೆ, ಅವರ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಜಯದೇವ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದು, ಇದಕ್ಕೆ ಸರಕಾರ ಸ್ಪಂದಿಸಿದೆ.
ಆದೇಶದ ಹಿನ್ನೆಲೆ ಮಂಜುನಾಥ್ ಅವರು ಮುಂದಿನ 2023ನೆ ವಾರ್ಷಿಕ ಸಾಲಿನ ಜು.19ರವರೆಗೂ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಸೇವೆ ಮುಂದುವರಿಯಲಿದ್ದಾರೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಅಗಿದ್ದ ಸಂದರ್ಭದಲ್ಲೂ ಸಹ ಡಾ.ಮಂಜುನಾಥ್ ಅವರ ಸೇವಾವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿತ್ತು. ಇದೀಗ ಬಸವರಾಜ ಬೊಮ್ಮಾಯಿ ಸರಕಾರ ಮತ್ತೊಂದು ವರ್ಷ ಸೇವಾವಧಿ ವಿಸ್ತರಿಸಿದೆ.
ಇಂಡಿಯನ್ ಮೆಡಿಕಲ್ ಕೌನ್ಸಿಲ್ ನಿಯಮದ ಪ್ರಕಾರ ಗರಿಷ್ಠ 70 ವರ್ಷದವರೆಗೂ ಸೇವೆ ಸಲ್ಲಿಸಬಹುದು. ಆದರೆ ಸದ್ಯ ಡಾ. ಮಂಜುನಾಥ್ ಅವರಿಗೆ 65 ವರ್ಷ ಮಾತ್ರ. ಹೀಗಾಗಿ ಇನ್ನಷ್ಟು ವರ್ಷ ಅವರನ್ನು ನಿರ್ದೇಶಕರಾಗಿ ಮುಂದುವರೆಸಬೇಕು ಎಂಬ ಒತ್ತಾಯಗಳು ಸಹ ಕೇಳಿಬಂದಿದ್ದವು.