×
Ad

ರಾಷ್ಟ್ರಪತಿ ಚುನಾವಣೆ: ವಿಧಾನಸೌಧದಿಂದ ದಿಲ್ಲಿಗೆ ವಿಮಾನದಲ್ಲಿ ‘ಬ್ಯಾಲೆಟ್ ಬಾಕ್ಸ್' ರವಾನೆ

Update: 2022-07-18 22:03 IST

ಬೆಂಗಳೂರು, ಜು. 18: ರಾಷ್ಟ್ರಪತಿ ಆಯ್ಕೆಗೆ ರಾಜ್ಯದಲ್ಲಿ ನಡೆದ ಮತದಾನ ಪ್ರಕ್ರಿಯೆ ಸುಗಮವಾಗಿ ಅಂತ್ಯ ಕಂಡಿದ್ದು, ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಒಟ್ಟು 224 ಮಂದಿ ಶಾಸಕರು ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ, ಸಂಸದ ವಿ.ಶ್ರೀನಿವಾಸ ಪ್ರಸಾದ್ ವಿಧಾನಸೌಧದಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ಸೋಮವಾರ ವಿಧಾನಸೌಧದ ಮೊದಲನೆ ಮಹಡಿಯಲ್ಲಿ ಕೊಠಡಿ ಸಂಖ್ಯೆ 106ರಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಬೆಳಗ್ಗೆ 10ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಯಿತು. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಬಹುತೇಕ ಎಲ್ಲ ಸದಸ್ಯರು ಮತದಾನ ಮಾಡಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮೊದಲಿಗೆ ಮತ ಚಲಾಯಿಸಿದರೆ, ಕಾಂಗ್ರೆಸ್ ಶಾಸಕ ಹುಣಸೂರು ಕ್ಷೇತ್ರದ ಎಚ್.ಪಿ.ಮಂಜುನಾಥ್ ಕೊನೆಯದಾಗಿ ಹಕ್ಕು ಚಲಾಯಿಸಿದ್ದು ವಿಶೇಷ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಆಗಮಿಸಿ ತಮ್ಮ ಹಕ್ಕು ಚಲಾವಣೆ ಮಾಡಿದರು.

ಬಿಜೆಪಿಯ 119, ಬಿಎಸ್ಪಿಯ ಎನ್.ಮಹೇಶ್ ಪಕ್ಷೇತರ ಸದಸ್ಯ ನಾಗೇಶ್ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಒಟ್ಟು 122, ಕಾಂಗ್ರೆಸ್‍ನ 69 ಹಾಗೂ ಪಕ್ಷೇತರ ಸದಸ್ಯರೊಬ್ಬರು ಸೇರಿ 70 ಹಾಗೂ ಜೆಡಿಎಸ್‍ನ 32 ಮಂದಿ ಸೇರಿದಂತೆ ಒಟ್ಟು 224 ಮಂದಿ ವಿಧಾನಸಭೆಯ ಸದಸ್ಯರು, ಓರ್ವ ರಾಜ್ಯಸಭೆ, ಓರ್ವ ಸಂಸದರು ಸೇರಿದಂತೆ ಒಟ್ಟು 226 ಮಂದಿ ಮತದಾನ ಮಾಡಿದ್ದಾರೆ.

ಬ್ಯಾಲೆಟ್ ಬಾಕ್ಸ್‍ಗೂ ಟಿಕೆಟ್: ಸಂಜೆ 5ಗಂಟೆ ನಂತರ ಮತಪೆಟ್ಟಿಗೆ ಸೀಲ್ ಮಾಡಿ ಸಂಜೆ 7ಗಂಟೆ ಸುಮಾರಿಗೆ ವಿಧಾನಸೌಧದಿಂದ ಬಿಗಿ ಭದ್ರತೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬ್ಯಾಲೆಟ್ ಬಾಕ್ಸ್ ಅನ್ನು ರವಾನೆ ಮಾಡಲಾಗಿದೆ. ರಾತ್ರಿ 9:20ರ ಸುಮಾರಿಗೆ ವಿಮಾನದಲ್ಲಿ ಹೊಸದಿಲ್ಲಿಗೆ ಮತಪೆಟ್ಟಿಗೆ ಕೊಂಡೊಯ್ಯಲಾಗುತ್ತದೆ. ಸಹಾಯಕ ಚುನಾವಣಾಧಿಕಾರಿಗೂ ಆಗಿರುವ ಮಹಾಲಿಂಗೇಶ್ ಹಾಗೂ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ರಾಘವೇಂದ್ರ ಮತಪೆಟ್ಟಿಗೆ ಜತೆ ತೆರಳಲಿದ್ದಾರೆ.

ಇಬ್ಬರು ಚುನಾವಣಾಧಿಕಾರಿಗಳೊಂದಿಗೆ ಬ್ಯಾಲೆಟ್ ಬಾಕ್ಸ್ ಗೂ ವಿಮಾನದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ್ದು, ಭದ್ರತೆ ದೃಷ್ಟಿಯಿಂದ ಚುನಾವಣಾಧಿಕಾರಿಗಳೊಂದಿಗೆ ಬ್ಯಾಲೆಟ್ ಬಾಕ್ಸ್‍ನ್ನು ಕೊಂಡೊಯ್ಯಲಾಗುತ್ತಿದ್ದು, ದಿಲ್ಲಿ ವಿಮಾನ ನಿಲ್ದಾಣದಿಂದ ಬಿಗಿ ಭದ್ರತೆಯೊಂದಿಗೆ ಸಂಸತ್ ಭವನಕ್ಕೆ ಕೊಂಡೊಯ್ಯಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೀಲ್ ಚೇರ್ ನಲ್ಲಿ ಬಂದ ದೇವೇಗೌಡ: ರಾಜ್ಯಸಭಾ ಸದಸ್ಯರು ಆಗಿರುವ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ವಿಧಾನಸೌಧ ಆವರಣದಲ್ಲಿವ್ಯವಸ್ಥೆ ಮಾಡಿದ್ದ ವೀಲ್ ಚೇರ್ ಮೂಲಕ ಆಗಮಿಸಿ ಮತದಾನ ಮಾಡಿದರು. ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಅನುಮತಿ ಪಡೆದು ವಿಧಾನಸೌಧದಲ್ಲಿ ಮತದಾನ ಮಾಡಿದರು.

ಪ್ರಸಾದ್-ಸಿದ್ದರಾಮಯ್ಯ ಮುಖಾಮುಖಿ: ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲೇ ಬದ್ಧ ವೈರಿಗಳಂತೆ ಇದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮೈಸೂರು-ಚಾಮರಾಜನಗರ ಕ್ಷೇತ್ರದ ಸಂಸದ ವಿ. ಶ್ರೀನಿವಾಸ ಪ್ರಸಾದ್ ವಿಧಾನಸೌಧದ ಮೊಗಸಾಲೆಯಲ್ಲೇ ಪರಸ್ಪರ ಮುಖಾಮುಖಿ ಉಭಯ ಕುಶಲೋಪರಿ ವಿಚಾರಿಸಿದ್ದು ವಿಶೇಷವಾಗಿತ್ತು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮತ ಚಲಾಯಿಸಿ ಹಿಂದಿರುಗುತ್ತಿದ್ದ ವೇಳೆ ಮತಗಟ್ಟೆಯತ್ತ ಆಗಮಿಸಿದ ವಿ.ಶ್ರೀನಿವಾಸ್ ಪ್ರಸಾದ್ ಮೊದಲನೆ ಮಹಡಿಯ ಮೊಗಸಾಲೆಯಲ್ಲಿ ಮುಖಾಮುಖಿಯಾದರು. ಇಬ್ಬರು ಪರಸ್ಪರ ನಗು.. ನಗುತ್ತಲೇ.. ಹಸ್ತಲಾಘವ ಮಾಡಿಕೊಂಡು ಕೆಲಕಾಲ ಮಾತುಕತೆ ನಡೆಸಿ ಉಭಯ ನಾಯಕರು ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News