ಬೆಂಗಳೂರಿನಲ್ಲಿ ಶಾಲೆಗೆ ಬಾಂಬ್ ಬೆದರಿಕೆ ಪ್ರಕರಣ: ಪರೀಕ್ಷೆ ಮುಂದೂಡಲು ವಿದ್ಯಾರ್ಥಿಯಿಂದಲೇ ಇ- ಮೇಲ್!
ಬೆಂಗಳೂರು, ಜು.19: ಇಲ್ಲಿನ ರಾಜರಾಜೇಶ್ವರಿ ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‍ಗೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪ ಪ್ರಕರಣ ಸಂಬಂಧ 10ನೆ ತರಗತಿ ಬಾಲಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪ್ರಾಪ್ತ ಬಾಲಕ ಹಿನ್ನೆಲೆ ಆತನ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ. ಘಟನೆ ಸಂಬಂಧ ಬಾಲನ್ಯಾಯ ಕಾಯ್ದೆ ಪ್ರಕಾರ ಬಾಲಕನ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
ಜು.21ರಂದು ಪರೀಕ್ಷೆಗಳು ನಿಗದಿ ಆಗಿದ್ದವು. ಆದರೆ, ವಿದ್ಯಾರ್ಥಿ ಹೆಚ್ಚು ಓದಿರಲಿಲ್ಲ. ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುವ ಭಯವಿತ್ತು. ಪರೀಕ್ಷೆ ಮುಂದೂಡುವ ಉದ್ದೇಶದಿಂದ ಬಾಂಬ್ ಬೆದರಿಕೆ ಕಳುಹಿಸಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ತಂದೆಯ ಲ್ಯಾಪ್‍ಟಾಪ್‍ನಲ್ಲಿ ಹುಚ್ಚ ವೆಂಕಟ್ ಹೆಸರಿನಲ್ಲಿ ಇ-ಮೇಲ್ ಸೃಷ್ಟಿಸಿದ್ದ ಬಾಲಕ, ಅದೇ ಇ-ಮೇಲ್‍ನಿಂದ ಶಾಲೆ ಇ-ಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿದ್ದ. ಶಾಲೆ ಆವರಣದಲ್ಲಿ ಬಾಂಬ್ ಸ್ಫೋಟಗೊಳ್ಳುವುದಾಗಿ ಬೆದರಿಸಿದ್ದ ಎನ್ನುವ ಮಾಹಿತಿಯೂ ತಿಳಿದುಬಂದಿದೆ.
ವಶಕ್ಕೆ ಪಡೆದಿರುವ ಬಾಲಕ ಸೋಮವಾರವೂ ವಿದ್ಯಾರ್ಥಿಯಂತೆ ಎಂದಿನಂತೆ ಶಾಲೆಗೆ ಬಂದಿದ್ದ. ಪೊಲೀಸರು ಶೋಧ ನಡೆಸುವಾಗಲೂ ಆತ ಸ್ಥಳದಲ್ಲಿದ್ದ. ಆದರೆ, ಈತ ಇ-ಮೇಲ್ ಕಳುಹಿಸಿದ್ದ ಮಾಹಿತಿ ಪೋಷಕರಿಗೂ ಗೊತ್ತಿರಲಿಲ್ಲ. ಈ ಬಗ್ಗೆ ಬಾಂಬ್ ಬೆದರಿಕೆ ಸಂಬಂಧ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ?: ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಶಾಲಾ ಸಿಬ್ಬಂದಿ, ಇ-ಮೇಲ್ ಪರಿಶೀಲಿಸುತ್ತಿದ್ದರು. ಇದೇ ವೇಳೆ ಅಪರಿಚಿತರೊಬ್ಬರು ಕಳುಹಿಸಿದ್ದ ಇ-ಮೇಲ್ ತೆರೆದಿದ್ದರು. ನಿಮ್ಮ ಶಾಲೆಯಲ್ಲಿ ಬಾಂಬ್ ಇರಿಸಲಾಗಿದೆ. ಸದ್ಯದಲ್ಲೇ ಅದು ಸ್ಫೋಟ ಆಗಲಿದೆ ಎಂದು ಬೆದರಿಕೆ ಹಾಕಲಾಗಿತ್ತು.
ಆತಂಕಗೊಂಡ ಶಾಲಾ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಬಾಂಬ್ ತನಿಖಾ ದಳ ಹಾಗೂ ಶ್ವಾನ ದಳದ ಸಿಬ್ಬಂದಿ, ಮಕ್ಕಳನ್ನು ಬೇರೆ ಸ್ಥಳಾಂತರಿಸಿ ಶೋಧ ಮಾಡಿದ್ದರು. ಹುಸಿ ಬಾಂಬ್ ಎಂದು ಪೊಲೀಸರು ಘೋಷಿಸಿದ್ದರು.