ಖ್ಯಾತ ಛಾಯಾಗ್ರಾಹಕ ಎ.ಎನ್.ಮುಕುಂದ್ ನಿಧನ

Update: 2022-07-19 14:52 GMT
ಎ.ಎನ್.ಮುಕುಂದ್

ಬೆಂಗಳೂರು, ಜು.19: ಅತ್ಯುತ್ತಮ ಛಾಯಾಗ್ರಾಹಕರಲ್ಲಿ ಒಬ್ಬರಾದ ಎ.ಎನ್.ಮುಕುಂದ್(67) ಕೊರೋನ ಸೋಂಕಿಗೆ ಬಲಿಯಾಗಿ, ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ ಕವಯತ್ರಿ ಉಮಾ ಮುಕುಂದ್, ಪುತ್ರ ಪ್ರತೀಕ್ ಮುಕುಂದ್‍ರನ್ನು ಅಗಲಿದ್ದಾರೆ. 

ಕಳೆದ ಒಂದು ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಮುಕುಂದ್, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಅವರಿಗೆ ಕೊರೋನ ಸೋಂಕು ತಗುಲಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರಂದು ಕುಟುಂಬವರ್ಗದವರು ತಿಳಿಸಿದ್ದಾರೆ. 

ನಾಡಿನ ಅತ್ಯುತ್ತಮ ಛಾಯಾಗ್ರಾಹಕರಲ್ಲಿ ಒಬ್ಬರಾದ ಮುಕುಂದ್, ಸುಮಾರು ಎರಡೂವರೆ ದಶಕಗಳ ಕಾಲ ಸಾಹಿತಿಗಳ, ಸಂಗೀತಗಾರರ, ರಾಜಕಾರಣಿಗಳ, ಮಕ್ಕಳ ಭಾವಚಿತ್ರಗಳನ್ನು ತಮ್ಮ ಕ್ಯಾಮರಾ ಕಣ್ಣಿನಿಂದ ಸೆರೆಹಿಡಿದು ಲೋಕಕ್ಕೆ ತೆರೆದಿಟ್ಟಿದ್ದರು. ಅವು ಪ್ರತಿಷ್ಠಿತ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗಿ ಜನಮನ ಗೆದ್ದಿದ್ದವು. 

ದಾವಣಗೆರೆಯ ಹರಿಹರದಲ್ಲಿ 1955ರಲ್ಲಿ ಜನಿಸಿದ ಮುಕುಂದ್, ವಿದ್ಯಾಭ್ಯಾಸದ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ 30 ವರ್ಷದ ಸೇವೆಯಲ್ಲಿದ್ದು, 2008ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ಬೆಂಗಳೂರಿನ ಬನ್ನೇರುಘಟ್ಟದ ಹುಳಿಮಾವು ಬಳಿ ವಾಸಿಸುತ್ತಿದ್ದರು.  

ತಾವು ತೆಗೆದ ಅಪರೂಪದ 50 ಮಂದಿ ಸಾಹಿತಿಗಳ, ರಂಗಕರ್ಮಿಗಳ ಮತ್ತು ಚಿತ್ರ ರಂಗದಲ್ಲಿ ದುಡಿದ ಮಹನೀಯರ ಚಿತ್ರಗಳನ್ನು ಮುಕುಂದ್, ಮುಖಮುದ್ರೆ ಎಂಬ ಪುಸ್ತಕ ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪರೂಪದ ಕೊಡುಗೆ ನೀಡಿದ್ದಾರೆ.

ಶ್ರೀಯುತರ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ 9.30ರ ಸುಮಾರಿಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎಂದು ಕುಟುಂಬವರ್ಗದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ