ಹೆರಿಗೆ ಸಂಬಂಧಿತ ಮೃತ್ಯು: ವಿಶ್ವಸಂಸ್ಥೆಯ ಗುರಿ ತಲುಪಲು 70% ಜಿಲ್ಲೆಗಳು ವಿಫಲ

Update: 2022-07-20 04:48 GMT

ಮುಂಬೈ: ದೇಶದ 640 ಜಿಲ್ಲೆಗಳ ಪೈಕಿ ಶೇಕಡ 70ರಷ್ಟು ಜಿಲ್ಲೆಗಳು ಹೆರಿಗೆ ಸಂಬಂಧಿತ ಸಾವಿನ "ಹಾಟ್ ಸ್ಪಾಟ್"ಗಳು ಎನಿಸಿದ್ದು, ಈ ಜಿಲ್ಲೆಗಳಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಗುರಿಯಲ್ಲಿ ನಿಗದಿಪಡಿಸಲಾದ ಪ್ರಮಾಣಕ್ಕಿಂತ ಅಧಿಕ ಹೆರಿಗೆ ಸಾವು ದಾಖಲಾಗುತ್ತಿದೆ ಎಂದು ಸಮಾಜ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ಹೆರಿಗೆ ಸಾವಿನ ಜಿಲ್ಲಾವಾರು ವಿಶ್ಲೇಷಣೆಯನ್ನು ನಿಖರವಾಗಿ ನಡೆಸಲಾಗಿದೆ ಎಂದು timesofindia.com ವರದಿ ಮಾಡಿದೆ.

ದಿಯೋನಾರ್‍ನ ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆಯ ಸಂಶೋಧಕರು 2017-2020ರ ಅವಧಿಯ 61.98 ದಶಲಕ್ಷ ಹೆರಿಗೆ ಹಾಗೂ 61,169 ಹೆರಿಗೆ ಸಾವಿನ ಅಂಕಿ ಅಂಶಗಳನ್ನು ವಿಶ್ಲೇಷಿಸಿದ್ದಾರೆ ಎಂದು ಪಿಎಲ್‍ಓಎಸ್ ಗ್ಲೋಬಲ್ ಪಬ್ಲಿಕ್ ಹೆಲ್ತ್ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ. (2011ರ ಜನಗಣತಿಯ ಮಾಹಿತಿಯನ್ನು ವಿಶ್ಲೇಷಿಸಲಾಗಿದ್ದು, 2022ರಲ್ಲಿ ಅಸ್ತಿತ್ವದಲ್ಲಿರುವ 773 ಜಿಲ್ಲೆಗಳ ಬದಲು ಕೇವಲ 640 ಜಿಲ್ಲೆಗಳೆಂದು ಪರಿಗಣಿಸಲಾಗಿದೆ)

ಹೆರಿಗೆ ಸಾವಿನ ದರ ಎಂದರೆ ಪ್ರತಿ ಒಂದು ಲಕ್ಷ ಹೆರಿಗೆಯ ವೇಳೆ ಸಂಭವಿಸುವ ಹೆರಿಗೆ ಅಥವಾ ಗರ್ಭಧಾರಣೆ ಸಂಬಂಧಿ ಸಂಕೀರ್ಣತೆಗಳಿಂದಾದ ಸಾವಿನ ಸಂಖ್ಯೆಯಾಗಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಅನ್ವಯ 2030ರ ವೇಳೆಗೆ ಇದು 70 ಆಗಿರಬೇಕು.

ಐಐಪಿಎಸ್ ಅಧ್ಯಯನದ ಪ್ರಕಾರ ಅರುಣಾಚಲ ಪ್ರದೇಶದಲ್ಲಿ ಹೆರಿಗೆ ಸಾವಿನ ದರ ಅತ್ಯಧಿಕ (284) ಇದ್ದು, ಮಹಾರಾಷ್ಟ್ರದಲ್ಲಿ ಕನಿಷ್ಠ (40). ಐದು ರಾಜ್ಯಗಳಲ್ಲಿ 210ಕ್ಕಿಂತ ಹೆಚ್ಚು ಎಂಎಂಆರ್ ದಾಖಲಾಗಿದೆ. ಅರುಣಾಚಲ ಪ್ರದೇಶದ ಟಿರಪ್ ಗರಿಷ್ಠ ಎಂಎಂಆರ್ ಹೊಂದಿದ್ದರೆ, ಹಿಮಾಚಲ ಪ್ರದೇಶದ ಕಿನ್ನೌರ್ ಕನಿಷ್ಠ ಎಂಎಂಆರ್ ಹೊಂದಿದೆ.

ವರದಿಯ ಪ್ರಕಾರ ಒಟ್ಟು 24 ರಾಜ್ಯಗಳ 450 ಜಿಲ್ಲೆಗಳಲ್ಲಿ ವಿಶ್ವಸಂಸ್ಥೆ ನಿಗದಿಪಡಿಸಿದ ಗುರಿಯಾದ 70 ಸಾವಿನ ಸಂಖ್ಯೆಗಿಂತ ಅಧಿಕ ಹೆರಿಗೆ ಸಾವು ಸಂಭವಿಸುತ್ತಿದೆ. ಎಂಟು ರಾಜ್ಯ ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಂಎಂಆರ್ ದರ 140-209 ಇದ್ದು, 11 ರಾಜ್ಯಗಳಲ್ಲಿ 70-139ರ ನಡುವೆ ಇದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News