ಬೆಂಗಳೂರು: ತಮ್ಮನನ್ನೇ ಹತ್ಯೆಗೈದ ಆರೋಪಿ ಅಣ್ಣನ ಬಂಧನ

Update: 2022-07-20 14:29 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.20: ಆಸ್ತಿ ವಿಚಾರಕ್ಕಾಗಿ ಸಹೋದರನನ್ನೆ ಕೊಲೆಗೈದಿರುವ ಆರೋಪ ಪ್ರಕರಣ ಸಂಬಂಧ ಓರ್ವನನ್ನು ಇಲ್ಲಿನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.  

ಕಾಮಾಕ್ಷಿಪಾಳ್ಯದ ಕಾವೇರಿಪುರಂನ ವಿನಯ್‍ಕುಮಾರ್(31) ಕೊಲೆಯಾದ ಸಹೋದರನಾಗಿದ್ದು, ಕೃತ್ಯ ನಡೆಸಿದ ಸತೀಶ್‍ಕುಮಾರ್(37)ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. 

ತಾವರೆಕೆರೆಯ ಅಮ್ಮ ಆಸ್ಪತ್ರೆಯಲ್ಲಿ ವಿನಯ್‍ಕುಮಾರ್ ಲ್ಯಾಬ್ ಇಟ್ಟುಕೊಂಡಿದ್ದು, ಕಾವೇರಿಪುರ ಮೂರನೆ ಮುಖ್ಯರಸ್ತೆಯಲ್ಲಿ ತಂದೆ ಬಿಎಂಟಿಸಿ ನಿವೃತ್ತ ಚಾಲಕ ಅರಸಯ್ಯ ತಾಯಿ ಜಯಮ್ಮ ಜೊತೆ ವಾಸಿಸುತ್ತಿದ್ದ. ಮೂರು ತಿಂಗಳ ಹಿಂದೆ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಜಯಮ್ಮ ಅವರ ಚಿನ್ನಾಭರಣಗಳನ್ನು ಅಡಮಾನ ಮಾಡಲಾಗಿತ್ತು.

ಈ ವಿಷಯವಾಗಿ ಸಹೋದರರ ನಡುವೆ ಜಗಳ ಉಂಟಾಗಿ ಮಾತನಾಡುವುದನ್ನು ಬಿಟ್ಟಿದ್ದರು. ಮನೆಯಲ್ಲಿ ತಮ್ಮನಿಗೆ ಭಾಗ ಕೊಡಬೇಕಾಗುವುದು ಎನ್ನುವ ಕಾರಣದಿಂದ ಹಿರಿಯ ಅಣ್ಣನಾದ ಸತೀಶ್‍ಕುಮಾರ್ ಆತನಿಗೆ ಬರುವ ಆಸ್ತಿಯನ್ನು ಕಬಳಿಸುವ ದುರಾಸೆಗೆ ಸಂಚು ರೂಪಿಸಿದ ಮಂಗಳವಾರ ಮಧ್ಯಾಹ್ನ ಜಗಳ ತೆಗೆದು ವಿನಯ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮೂರನೇ ಮಹಡಿಯಿಂದ ಕೆಳಗೆ ಎಸೆದುಹೋಗಿದ್ದ. 

ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ವಿನಯ್‍ನನ್ನು ಸ್ಥಳೀಯ ಲಕ್ಷ್ಮೀ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಮೃತರ ತಾಯಿ ಜಯಮ್ಮ ನೀಡಿದ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿ ಸತೀಶ್‍ಕುಮಾರ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News