×
Ad

ಬೆಳ್ತಂಗಡಿ: ರಸ್ತೆ ಸರಿಪಡಿಸಲು ಒತ್ತಾಯಿಸಿ ಬಾಳೆಗಿಡ ನೆಟ್ಟು ಪ್ರತಿಭಟನೆ

Update: 2022-07-20 20:26 IST

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ಗುಂಡಿಗಳಿವೆ. ಅಪಘಾತಕ್ಕೆ ಕಾರಣವಾಗಿದೆ. ಕನಿಷ್ಠ ಅದನ್ನು ದುರಸ್ತಿ ಮಾಡುವ ಕೆಲಸ ಮಾಡುವ ಗೋಜಿಗೆ ಹೋಗಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸಮ್ಮಾನ ಕಾರ್ಯಕ್ರಮ ನಡೆಸುವ ಬದಲಾಗಿ ಜನರ ಜೀವ ಉಳಿಸುವ ಸಲುವಾಗಿ ಶಾಸಕರು ರಸ್ತೆ ಗುಂಡಿ ಮುಚ್ಚುವ ಕಾರ್ಯ ಮಾಡಲಿ ಎಂದು ಯುವ ಕಾಂಗ್ರೆಸ್ ಬೆಳ್ತಂಗಡಿ ನಗರ ಅಧ್ಯಕ್ಷ ಅನಿಲ್ ಪೈ ಹೇಳಿದರು.

ಬೆಳ್ತಂಗಡಿಯ ಮುಖ್ಯ ರಸ್ತೆ ಹದಗೆಟ್ಟಿರುವ ವಿಚಾರವಾಗಿ ಗುಂಡಿ ಮುಚ್ಚಿ ಜೀವ ಉಳಿಸಿ ಎಂದು ಗುರುವಾಯನಕೆರೆ ಬಂಟರಭವನ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಿದ ಬಳಿಕ ಮಾತನಾಡಿದರು.

ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ತಾಲೂಕಿನ ರಾಜ್ಯ ಹೆದ್ದಾರಿಗಳು ಗುಂಡಿಯಲ್ಲಿ ರಸ್ತೆಯೋ ಅಥವಾ ರಸ್ತೆಯಲ್ಲಿ ಗುಂಡಿಯೋ ಎಂಬ ಅನುಮಾನ ಉಂಟಾಗುತ್ತದೆ. ಶಾಸಕ ಹರೀಶ್ ಪೂಂಜ ತಾಲೂಕಿನ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಬದಲಾಗಿ ಬೆಳ್ತಂಗಡಿಯಲ್ಲಿ ವಿಮಾನ ನಿಲ್ದಾಣ ಮಾಡುತ್ತೇವೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಶಾಸಕರು ರಸ್ತೆಗಳಲ್ಲಿರುವ ಗುಂಡಿಯನ್ನು ಮುಚ್ಚದಿದ್ದರೆ ತಾಲೂಕಿನಾದ್ಯಂತ ಗ್ರಾಮ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಈ ಪ್ರತಿಭಟನೆಯಲ್ಲಿ ಮಾಜಿ ತಾ.ಪಂ. ಸದಸ್ಯ ಪ್ರವೀಣ್ ಕೊಯ್ಯುರು, ಅಲ್ಪಸಂಖ್ಯಾತ ಘಟಕದ ನಗರ ಅಧ್ಯಕ್ಷ ಸಲೀಂ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವತ್ ರಾಜ್, ಯುವ ಇಂಟಕ್ ಅಧ್ಯಕ್ಷ ನವೀನ್ ಸಾವಣಾಲು, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಂದೀಪ್ ನೀರಲ್ಕೆ, ಪ್ರಜ್ವಲ್ ಜೈನ್, ಗಣೇಶ್ ಕಣಿಯೂರು, ಆರೀಫ್ ಬೆಳ್ತಂಗಡಿ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News