ಮಂಗಳೂರು | ಕದ್ರಿ ಪಾರ್ಕ್‌ನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ ಉದ್ಘಾಟನೆ
ಮಂಗಳೂರು, ಡಿ.13: ಸಂತ ಮದರ್ ತೆರೆಸಾ ವೇದಿಕೆ ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಜಂಟಿ ಆಶ್ರಯದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಸೌಹಾರ್ದ ಕ್ರಿಸ್ಮಸ್ ಉತ್ಸವ ಶನಿವಾರ ಉದ್ಘಾಟನೆಗೊಂಡಿತು.
ರಾಷ್ಟ್ರೀಯ ಯುವ ಕ್ರೀಡಾಪಟು, ವಿದ್ಯಾರ್ಥಿ ಯುವರಾಜ್ ಕುಂದರ್ ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ. ಸುದೀಪ್ ಕ್ರಿಸ್ಮಸ್ ಸಂದೇಶ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಾಧ್ಯಾಪಕ ಡಾ. ಜಾರ್ಲ್ಸ್ ಫುಟ್ತಾದೊ ಮತ್ತು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಹಾಗೂ ಕಲಾವಿದ ಶ್ಯಾಮ್ ಸುಂದರ್ ಶುಭ ಹಾರೈಸಿದರು.
ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಸ್ಕೇಟಿಂಗ್ ಪಟು ಯುವರಾಜ್ ಕುಂದರ್‌ರನ್ನು ಸನ್ಮಾನಿಸಲಾಯಿತು. ದಾನಿ ಮೈಕಲ್ ಡಿಸೋಜರನ್ನು ಗೌರವಿಸಲಾಯಿತು. ಕ್ರಿಸ್ಮಸ್ ಖೇಲ್ ಸ್ಪರ್ಧೆಯಲ್ಲಿ ವಿಜೇತರಾದ ಸಂತ ಆಗ್ನೆಸ್ ಕಾಲೇಜು (ಪ್ರಥಮ), ಸಂತ ಅಲೋಶಿಯಸ್ ಕಾಲೇಜು (ದ್ವಿತೀಯ), ಸೀತಾ ಭಟ್ ಬಳಗ (ತೃತೀಯ)ಕ್ಕೆ ಬಹುಮಾನ ವಿತರಿಸಲಾಯಿತು.
ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ತೆಲಿನೊ ಅಧ್ಯಕ್ಷತೆ ವಹಿಸಿದ್ಧರು. ಕಥೊಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿಸೋಜ, ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೊ, ಉದ್ಯಮಿ ಸಂತೋಷ್ ಸಿಕ್ವೇರಾ, ಡೊಲ್ಫಿ ಡಿಸೋಜ, ವಿಲ್ಮಾ ಮೊಂತೇರೊ ಉಪಸ್ಥಿತರಿದ್ದರು.
ವೇದಿಕೆಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ಜಾನ್ ರೋಹನ್ ಕಾರ್ಯಕ್ರಮ ನಿರೂಪಿಸಿದರು. ಉತ್ಸವದ ಸಂಚಾಲಕ ಸ್ಟ್ಯಾನಿ ಲೋಬೊ ವಂದಿಸಿದರು.