ಪ್ರಾದೇಶಿಕ ಆಯುಕ್ತರ ಆದೇಶ ನ್ಯಾಯಾಂಗ ನಿಂದನೆಯಾಗಲಿದೆ: ಶಾಸಕ ಝಮೀರ್ ಅಹ್ಮದ್

Update: 2022-07-20 17:19 GMT

ಬೆಂಗಳೂರು, ಜು.20: ಬೆಂಗಳೂರಿನ ವಿಜಯನಗರದ ಹೊಸಹಳ್ಳಿ ಪ್ರದೇಶದಲ್ಲಿರುವ ಮಸ್ಜಿದ್-ಎ-ಅಲ್-ಖೂಬವನ್ನು ಕೆಡವಲು ಬೆಂಗಳೂರಿನ ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಆದೇಶವು ನ್ಯಾಯಾಂಗ ನಿಂದನೆಯಾಗಲಿದೆ. ಈ ಮಸೀದಿಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‍ನಲ್ಲಿದ್ದು 2014ರಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಚಾಮರಾಜಪೇಟೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಆಸ್ತಿಗೆ ಸಂಬಂಧಿಸಿದಂತೆ ಯಾವುದೆ ದಾಖಲೆಗಳಿಲ್ಲದಿದ್ದರೂ, 2021ರ ಸೆಪ್ಟಂಬರ್‍ನಲ್ಲಿ ಸರಕಾರವು ಜಾರಿಗೆ ತಂದಿರುವ ಪೂಜಾ ಸ್ಥಳಗಳ ಸಂರಕ್ಷಣಾ ಕಾಯ್ದೆಯಡಿ, ಪೂಜಾ ಸ್ಥಳವು ಸರಕಾರಿ ಜಮೀನಿನಲ್ಲಿದ್ದರೂ ಅದನ್ನು ಕೆಡವಲು ಸಾಧ್ಯವಿಲ್ಲ ಎಂದರು.

ಮಸೀದಿಯನ್ನು ಕೆಡವಲು ಪ್ರಾದೇಶಿಕ ಆಯುಕ್ತರ ಆದೇಶದಂತೆ ಬಿಬಿಎಂಪಿ ದಕ್ಷಿಣ ವಲಯ ಆಯುಕ್ತರಿಂದ ನೋಟಿಸ್ ಬಂದಿರುವುದರಿಂದ ಸ್ಥಳೀಯ ಮುಸ್ಲಿಮರು ಆತಂಕಕ್ಕೆ ಒಳಗಾಗಿದ್ದಾರೆ. ಮಸೀದಿಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಆದುದರಿಂದ, ಮುಸ್ಲಿಮರು ಆತಂಕ ಪಡಬೇಕಿಲ್ಲ ಎಂದು ಅವರು ಅಭಯ ನಿಡಿದರು.

ಮಸೀದಿಯು ಖಾಸಗಿಯವರ ಒಡೆತನದಲ್ಲಿರುವ ಜಾಗದಲ್ಲಿ ನಿರ್ಮಿಸಲಾಗಿದೆ. ಇದು ಬಿಬಿಎಂಪಿ ಆಸ್ತಿಯಲ್ಲ. ನಿವೇಶನ ಸಂಖ್ಯೆ 13 ಹಾಗೂ 15ರಲ್ಲಿ ಮಸೀದಿ ಇದೆ. 1995ರಲ್ಲಿ ಈ ಮಸೀದಿ ನಿರ್ಮಾಣಕ್ಕಾಗಿ ನಿವೇಶನ ಸಂಖ್ಯೆ 13ನ್ನು ಮಸೀದಿಯ ಹೆಸರಿನಲ್ಲಿ ನೋಂದಣಿ ಮಾಡಲಾಗಿತ್ತು. ಮಸೀದಿಯು ತಮ್ಮ ಸ್ವಂತ ಜಮೀನಿನಲ್ಲಿ ಸಾರ್ವಜನಿಕರ ಓಡಾಟಕ್ಕೆ ಜಾಗವನ್ನು ಬಿಟ್ಟುಕೊಟ್ಟಿತ್ತು ಎಂದು ಅವರು ಹೇಳಿದರು.

2001ರಲ್ಲಿ ನಿವೇಶನ ಸಂಖ್ಯೆ 15 ಅನ್ನು ಖರೀದಿಸಲಾಯಿತು. ಈಗ ಮಸೀದಿಯು ಒಟ್ಟು 2835 ಚದರ ಅಡಿಗಳಲ್ಲಿದೆ. ಆದರೆ, ಕೆಲವು ಮತೀಯವಾದಿ ಸಂಘಟನೆಗಳು ಮಸೀದಿ ನಿರ್ಮಾಣಕ್ಕಾಗಿ ಬಿಬಿಎಂಪಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಅಪಪ್ರಚಾರ ಮಾಡುತ್ತಿವೆ. ಆದರೆ, ಬಿಬಿಎಂಪಿ ವತಿಯಿಂದ ನೀಡಲಾಗುವ ಖಾತೆ ಸೇರಿದಂತೆ ಇನ್ನಿತರ ಅಧಿಕೃತ ದಾಖಲೆಗಳು ಮಸೀದಿಯ ಹೆಸರಿನಲ್ಲಿವೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

2010ರಲ್ಲಿ ಈ ಜಮೀನಿನ ಮಾಲಕತ್ವದ ಕುರಿತು ವಿವಾದ ಹುಟ್ಟು ಹಾಕುವ ಯತ್ನ ನಡೆದಾಗ ಬಿಬಿಎಂಪಿ ಈ ಕುರಿತು ತನಿಖೆ ನಡೆಸುವ ಜವಾಬ್ದಾರಿಯನ್ನು ರಾಜ್ಯದ ನಗರಾಭಿವೃದ್ಧಿ ಇಲಾಖೆಗೆ ನೀಡಿತ್ತು. ನಗರಾಭಿವೃದ್ಧಿ ಇಲಾಖೆಯು ಸುದೀರ್ಘ ತನಿಖೆ ನಡೆಸಿ, ಮಸೀದಿಯ ಸಮೀಪ 225 ಚದರ ಅಡಿಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಮಸೀದಿಯಿರುವ ಭೂಮಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಿದ್ದರೂ ಅಕ್ರಮ ಆಸ್ತಿ ಎಂದು ನೋಟಿಸ್ ನೀಡಿರುವುದು ತಪ್ಪು. ಈ ಸಂಬಂಧ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ತಡೆಯಾಜ್ಞೆ ಪಡೆಯಲಾಗಿದೆ ಎಂದು ಅವರು ಹೇಳಿದರು. 
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಕೆ.ಅಲ್ತಾಫ್ ಖಾನ್, ಡಾ.ಎಚ್.ಎಂ.ಶಕೀಲ್ ನವಾಝ್, ಅಬ್ದುಲ್ ರಜಾಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News