ಉಪರಾಷ್ಟ್ರಪತಿ ಚುನಾವಣೆ; ಮತದಾನದಿಂದ ದೂರ ಉಳಿಯಲು ಟಿಎಂಸಿ ನಿರ್ಧಾರ

Update: 2022-07-22 01:51 GMT
ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ಮಾರ್ಗರೇಟ್ ಆಳ್ವ ಅವರನ್ನು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಘೋಷಿಸುವ ಮುನ್ನ ಪಕ್ಷವನ್ನು ಸಂಪರ್ಕಿಸಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡಿರುವ ತೃಣಮೂಲ ಕಾಂಗ್ರೆಸ್ ಪಕ್ಷ ಆಗಸ್ಟ್ 6ರಂದು ನಡೆಯುವ ಉಪರಾಷ್ಟ್ರಪತಿ ಹುದ್ದೆಯ ಚುನಾವಣೆಯಿಂದ ಹೊರಗುಳಿಯಲು ನಿರ್ಧರಿಸಿದ್ದು, ಯಾವುದೇ ಕಾರಣಕ್ಕೆ ಎನ್‍ಡಿಎ ಅಭ್ಯರ್ಥಿ ಜಗದೀಪ್ ಧನ್‍ಕರ್ ಅವರನ್ನ ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ timesofindia.com ವರದಿ ಮಾಡಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತಮ್ಮ ನಿವಾಸದಲ್ಲಿ 32 ಮಂದಿ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರ ಬಳಿ ಚರ್ಚಿಸಿದ ಬಳಿಕ ಉಪರಾಷ್ಟ್ರಪತಿ ಚುನಾವಣೆ ಬಗ್ಗೆ ಮೊದಲ ಬಾರಿಗೆ ತೃಣಮೂಲ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರು ಮೊದಲ ಬಾರಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

"ಕಳೆದ ಮೂರು ವರ್ಷಗಳಿಂದ ಬಂಗಾಳದ ರಾಜ್ಯಪಾಲರಾಗಿ ಧನ್‍ಕರ್ ನಿರ್ವಹಿಸಿದ ಪಾತ್ರದ ಹಿನ್ನೆಲೆಯಲ್ಲಿ, ಎನ್‍ಡಿಎ ಅಭ್ಯರ್ಥಿಯಾಗಿರುವ ಅವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ" ಎಂದು ಖಡಾಖಂಡಿತವಾಗಿ ನಿರಾಕರಿಸಿದರು.

"ಸಂಸತ್ತಿನಲ್ಲಿ 35 ಸದಸ್ಯರ ಬಲ ಹೊಂದಿರುವ ನಮ್ಮ ಪಕ್ಷದ ಜತೆ ಚರ್ಚಿಸದೇ ಅವರ ಉಮೇದುವಾರಿಕೆಯನ್ನು ಘೋಷಿಸಿದ ಕಾರಣದಿಂದ ವಿರೋಧ ಪಕ್ಷಗಳ ಅಭ್ಯರ್ಥಿಯಾದ ಮಾರ್ಗರೇಟ್ ಆಳ್ವ ಅವರನ್ನು ನವು ಬೆಂಬಲಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ವಿರೋಧ ಪಕ್ಷದ ಮುಖಂಡ ಶರದ್ ಪವಾರ್ ಅವರು, ನಮ್ಮ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾರೆ. ಆದರೆ ಅದು ಸಭೆಯ ಬಳಿಕ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News