ಕೇಂದ್ರ ಸರಕಾರ ಸಂಸತ್ತಿನ ಮಾರ್ಗವನ್ನು ತೊರೆದು ಸರ್ವಾಧಿಕಾರದತ್ತ ಹೆಜ್ಜೆ ಹಾಕುತ್ತಿದೆ: ಮಾವಳ್ಳಿ ಶಂಕರ್

Update: 2022-07-22 12:56 GMT

ಬೆಂಗಳೂರು, ಜು.22: ಕೇಂದ್ರ ಸರಕಾರವು ಸಂಸತ್ತಿನ ಮಾರ್ಗವನ್ನು ತೊರೆದು, ಸರ್ವಾಧಿಕಾರದ ಧೋರಣೆಗಳನ್ನು ಅನುಸರಿಸುತ್ತಿದೆ. ಸರಕಾರದ ಈ ಮಾರ್ಗವು ದೇಶದ ಬಹುಸಂಖ್ಯಾತರಲ್ಲಿ ಆತಂಕವನ್ನು ಉಂಟು ಮಾಡುತ್ತಿದೆ ಎಂದು ದಲಿತ ಮುಖಂಡ ಮಾವಳ್ಳಿ ಶಂಕರ್ ಕಳವಳ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಗಾಂಧಿ ಭವನದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಆಯೋಜಿಸಿದ್ದ ಮಾವಳ್ಳಿ ಶಂಕರ್‍ರ 60ನೇ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಕಾರಗಳ ಈ ಧೋರಣೆಗಳನ್ನು ಖಂಡಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಹೊರಬೇಕು. ದಲಿತ ಚಳುವಳಿ ನಾಯಕ ಪ್ರೊ. ಬಿ.ಕೃಷ್ಣಪ್ಪ ಅವರು ಕಂಡ ಕನಸನ್ನು ನನಸು ಮಾಡಬೇಕು. ಕರ್ನಾಟಕದಲ್ಲಿ ದಲಿತ ಚಳುವಳಿಗಳು ಪುನಾರಾಂಭವಾಗಬೇಕು ಎಂದು ಕರೆ ನೀಡಿದರು. 

ಸರಕಾರಗಳ ಅನ್ಯಾಯದ ವಿರುದ್ಧ ನಡೆಯುವ ಹೋರಾಟಗಳನ್ನು ನಾವು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಅವು ಜೀವಂತವಾಗಿರಬೇಕು ಎಂದ ಅವರು, ಇಂತಹ ಸಮಾರಂಭಗಳು ನಮಗೆ ಕೇವಲ ಸಂತೋಷವನ್ನು ಮಾತ್ರ ನೀಡುವುದಿಲ್ಲ, ಬದಲಾಗಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಲಿತ ಮುಖಂಡ ಗುರುಪ್ರಸಾದ್ ಕೆರಗೋಡು ಅವರು ಮಾತನಾಡಿ, ಬಜೆಟ್‍ನಲ್ಲಿ ದಲಿತರ ಹಕ್ಕಿನ ಪಾಲನ್ನು ಕುರಿತು ಆರಂಭಿಸಿದ ಎಸ್‍ಸಿಪಿ ಮತ್ತು ಟಿಎಸ್‍ಪಿ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಮಾವಳ್ಳಿ ಶಂಕರ್ ಅವರು ನಡೆಸಿದ ದಲಿತ ಹೋರಾಟಗಳು ಚಳುವಳಿಯ ಮೈಲುಗಲ್ಲುಗಳಾಗಿವೆ. ದಶಕಗಳ ಕೆಳಗೆ ‘ಸಂವಿದಾನ ಸಂಕಲ್ಪ ದಿನ’ವನ್ನು ಸಂಘಟನೆಯ ಕಾರ್ಯಕ್ರಮವಾಗಿಸಿದ್ದ ಶಂಕರ್, ದಲಿತ ಸಂಘರ್ಷ ಸಮಿತಿಯ ಸಂಘಟನೆಯ ರಾಜ್ಯ ಸಂಚಾಲಕರಾಗಿ ಚಳುವಳಿಯನ್ನು ಗಟ್ಟಿಗೊಳಿಸುತ್ತಾ ಬಂದಿದ್ದಾರೆ. ಅಂಬೇಡ್ಕರ್‍ವಾದ ಪತ್ರಿಕೆಯನ್ನು ಹೊರತಂದು ದಲಿತ ಚಳುವಳಿಗಳನ್ನು ದಾಖಲಿಸಿದ್ದಾರೆ ಎಂದು ನೆನಪಿಸಿಕೊಂಡರು. 

ಕಾರ್ಯಕ್ರಮದಲ್ಲಿ ರೈತ ಮುಖಂಡ ಬಡಗಲಪುರ ನಾಗೇಂದ್ರ, ಲಕ್ಷ್ಮೀನಾರಾಯಣ ನಾಗವಾರ, ನಟರಾಜ್ ಹುಳಿಯಾರ್ ಮತ್ತಿತರ ಮುಖಂಡರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News