'ಸಿಂಹಗಳು ಆಕ್ರಮಣಕಾರಿಯಾಗಿ ಕಾಣುತ್ತವೆ’: ಸಂಸತ್ ಕಟ್ಟಡದ ಮೇಲಿನ ರಾಷ್ಟ್ರ ಲಾಂಛನದ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ

Update: 2022-07-22 15:17 GMT
Photo: Scroll.in

ಹೊಸದಿಲ್ಲಿ: ಹೊಸ ಸಂಸತ್‌ ಕಟ್ಟಡದ ಮೇಲಿರುವ ರಾಷ್ಟ್ರೀಯ ಲಾಂಛನದ ವಿನ್ಯಾಸವು 2005 ರ ಭಾರತದ ರಾಜ್ಯ ಲಾಂಛನ (ಅನುಚಿತ ಬಳಕೆ ನಿಷೇಧ) ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಲಾಗಿದೆ ಎಂದು livelaw ಶುಕ್ರವಾರ ವರದಿ ಮಾಡಿದೆ.

ವರದಿ ಪ್ರಕಾರ, ಲಾಂಛನದಲ್ಲಿ ಚಿತ್ರಿಸಲಾದ ಸಿಂಹಗಳು ಬಾಯಿ ತೆರೆದು ಕೋರೆಹಲ್ಲುಗಳನ್ನು ತೋರಿಸುವ ಮೂಲಕ ಉಗ್ರ ಮತ್ತು ಆಕ್ರಮಣಕಾರಿಯಾಗಿ ಕಂಡುಬರುತ್ತವೆ ಎಂದು ವಕೀಲರಾದ ಅಲ್ದಾನೀಶ್ ರೇನ್ ಮತ್ತು ರಮೇಶ್ ಕುಮಾರ್ ಮಿಶ್ರಾ  ಮನವಿ ಮಾಡಿದ್ದಾರೆ.

ಜುಲೈ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಂಚಿನಿಂದ ತಯಾರಿಸಿದ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದರು. ಇದು 6.5-ಮೀಟರ್ ಎತ್ತರ ಮತ್ತು 9,500 ಕಿಲೋಗ್ರಾಂಗಳಷ್ಟು ತೂಕವಿದೆ. ಹೊಸ ಪಾರ್ಲಿಮೆಂಟ್ ಕಟ್ಟಡದ ಛಾವಣಿಯ ಮೇಲೆ ಇದನ್ನು ನಿಲ್ಲಿಸಲಾಗಿದೆ. ಇದು ಹೊಸದಿಲ್ಲಿಯ ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿದೆ.

ರಾಷ್ಟ್ರೀಯ ಲಾಂಛನದ ವಿನ್ಯಾಸವನ್ನು ಬದಲಾಯಿಸುವ ಮೂಲಕ ಕೇಂದ್ರವು ಅದರ ಪಾವಿತ್ರ್ಯತೆಯನ್ನು ಉಲ್ಲಂಘಿಸಿದೆ ಎಂದು ವಕೀಲರು ತಮ್ಮ ಮನವಿಯಲ್ಲಿ ಆರೋಪಿಸಿದ್ದಾರೆ.

"ಭಾರತದ ರಾಷ್ಟ್ರ ಲಾಂಛನವು ಭಾರತ ಗಣರಾಜ್ಯದ ಗುರುತು. ಭಾರತೀಯ ಗಣರಾಜ್ಯವು  ಭಾರತೀಯರಿಗೆ ಸೇರಿದೆ. ಈ ಗುರುತನ್ನು ತಿರುಚಿದಾಗ, ಅದು ದೇಶದ ನಾಗರಿಕರ ರಾಷ್ಟ್ರೀಯ ಭಾವನೆಗಳನ್ನು ನೋಯಿಸುತ್ತದೆ" ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದ ಮರುದಿನವೇ ಹಲವಾರು ವಿರೋಧ ಪಕ್ಷದ ನಾಯಕರು ಅದರ ವಿನ್ಯಾಸದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. “ಸಾರನಾಥದಲ್ಲಿರುವ ಅಶೋಕ ಸ್ತಂಭದ ಮೇಲಿರುವ ಸಿಂಹಗಳ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸುವುದು ಭಾರತದ ರಾಷ್ಟ್ರೀಯ ಚಿಹ್ನೆಗೆ ಮಾಡಿದ ಅವಮಾನವಲ್ಲದೆ ಮತ್ತೇನೂ ಅಲ್ಲ!” ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News