ಏರ್‌ಲೈನ್ಸ್‌ ಗೆ ವಿಕಲಾಂಗರ ಪ್ರಯಾಣವನ್ನು ತಡೆಯುವ ಮುನ್ನ ವೈದ್ಯರ ಸಲಹೆ ಕಡ್ಡಾಯ: ಡಿಜಿಸಿಎ

Update: 2022-07-22 16:55 GMT

ಹೊಸದಿಲ್ಲಿ,ಜು.22: ವಿಮಾನಯಾನ ಸಂಸ್ಥೆಗಳು ವೈದ್ಯರೊಂದಿಗೆ ಸಮಾಲೋಚಿಸದೆ ವಿಕಲಾಂಗ ವ್ಯಕ್ತಿಗಳು ವಿಮಾನ ಹತ್ತುವುದನ್ನು ತಡೆಯುವಂತಿಲ್ಲ ಎಂದು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಶುಕ್ರವಾರ ಸ್ಪಷ್ಟಪಡಿಸಿದೆ.

ಮೇ 8ರಂದು ರಾಂಚಿಯಲ್ಲಿ ಭಿನ್ನ ಸಾಮರ್ಥ್ಯದ ಬಾಲಕನಿಗೆ ಹೈದರಾಬಾದ್ ಗೆ ತೆರಳಲು ವಿಮಾನವನ್ನೇರಲು ಇಂಡಿಗೋ ವಿಮಾನಯಾನ ಸಂಸ್ಥೆಯು ಅನುಮತಿ ನಿರಾಕರಿಸಿದ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಡಿಜಿಸಿಎ ನಿಯಮಗಳನ್ನು ಪರಿಷ್ಕರಿಸಿದೆ. ‌

ಬಾಲಕ ಭಯಗೊಂಡ ಸ್ಥಿತಿಯಲ್ಲಿದ್ದ ಮತ್ತು ವಿಮಾನಯಾನದ ಸುರಕ್ಷತೆಗೆ ಬೆದರಿಕೆಯಾಗಿದ್ದ ಎಂದು ಇಂಡಿಗೋ ಪ್ರತಿಪಾದಿಸಿತ್ತಾದರೂ ಪ್ರಯಾಣಿಕನನ್ನು ನಿರ್ವಹಿಸುವಲ್ಲಿ ಅದು ಲೋಪವೆಸಗಿದೆ ಎಂದು ವಿಚಾರಣೆಯಲ್ಲಿ ಕಂಡುಕೊಂಡಿದ್ದ ಡಿಜಿಸಿಎ ಸಂಸ್ಥೆಗೆ ಐದು ಲ.ರೂ.ಗಳ ದಂಡವನ್ನು ವಿಧಿಸಿತ್ತು. ಅಂಗವೈಕಲ್ಯ ಅಥವಾ ಕುಂಠಿತ ಚಲನಶೀಲತೆಯ ಆಧಾರದಲ್ಲಿ ಯಾವುದೇ ವ್ಯಕ್ತಿಗೆ ವಿಮಾನಯಾನ ಸಂಸ್ಥೆಗಳು ಪ್ರಯಾಣವನ್ನು ನಿರಾಕರಿಸಬಾರದು ಎಂದು ವಿಕಲಾಂಗ ವ್ಯಕ್ತಿಗಳ ಪ್ರಯಾಣದ ಕುರಿತು ಡಿಜಿಸಿಎ ನಿಬಂಧನೆಯು ಹೇಳುತ್ತದೆ. 

ಇಂತಹ ವ್ಯಕ್ತಿಗಳ ಆರೋಗ್ಯವು ಯಾನದ ಸಂದರ್ಭದಲ್ಲಿ ಹದಗೆಡಬಹುದು ಎಂದು ವಿಮಾನಯಾನ ಸಂಸ್ಥೆಗಳು ಭಾವಿಸಿದರೆ ವೈದ್ಯರಿಂದ ಅಂತಹ ವ್ಯಕ್ತಿಯ ವೈದ್ಯಕೀಯ ಸ್ಥಿತಿಯ ಬಗ್ಗೆ ಸ್ಪಷ್ಟನೆ ಮತ್ತು ಆತ ವಿಮಾನ ಪ್ರಯಾಣಕ್ಕೆ ಅರ್ಹನೇ ಎಂಬ ಬಗ್ಗೆ ಅವರ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು. ಇದರ ಬಳಿಕ ಲಿಖಿತ ವಿವರಣೆಯ ನಂತರವಷ್ಟೇ ಅಂತಹ ವ್ಯಕ್ತಿಗೆ ವಿಮಾನವನ್ನು ಹತ್ತಲು ನಿರಾಕರಿಸುವ ಬಗ್ಗೆ ನಿರ್ಧರಿಸಬಹುದು ಎಂದು ಅದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News