×
Ad

ಉಳ್ಳಾಲ ರೈಲ್ವೆ ಇಲಾಖೆಯ ವಿದ್ಯುತ್ ತಂತಿ ಕಳವು; ಪರಾರಿಯಾಗುತ್ತಿದ್ದ ಟೆಂಪೋ ಪಲ್ಟಿಯಾಗಿ ನಾಲ್ವರಿಗೆ ಗಾಯ

Update: 2022-07-22 23:45 IST

ಉಳ್ಳಾಲ: ರೈಲ್ವೆ ಇಲಾಖೆ ಗೋದಾಮಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಿದ್ಯುತ್ ತಂತಿ ಕಳವು ಮಾಡಿ ಪರಾರಿಯಾಗುತ್ತಿದ್ದ ಟೆಂಪೋ ತೊಕ್ಕೊಟ್ಟು ಮೇಲ್ಸೇತುವೆ ಬಳಿ ಪಲ್ಟಿಯಾಗಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಲ್ಲಿ ಇಬ್ಬರು ಮಹಿಳೆಯರೂ ಇದ್ದರು. ಸದ್ಯ ಆರೋಪಿಗಳನ್ನು ಉಳ್ಳಾಲ ಪೊಲೀಸರು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಗಾಯಾಳುಗಳನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಮಿಳುನಾಡು ಮೂಲದ ಸೂಟರ್ ಪೇಟೆ ನಿವಾಸಿ ವೆಂಕಟೇಶ, ಹೊಯ್ಗೆ ಬಜಾರಿನ ಜಯಲಕ್ಷ್ಮಿ, ನಂದಿನಿ ಹಾಗೂ ಮುಲ್ಕಿಯ ರಾಜ್ ಕುಮಾರ್ ಟೆಂಪೋದಲ್ಲಿದ್ದವರು. ಇದರಲ್ಲಿ ಇಬ್ಬರು ಮಹಿಳೆಯರು ಹಾಗೂ ವೆಂಕಟೇಶ್‌ ವಿರುದ್ಧ ಈ ಮೊದಲು ರೈಲ್ವೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.

ಸೋಮೇಶ್ವರ ಬಳಿ ರೈಲ್ವೆ ಕಾಮಗಾರಿಗಾಗಿ ಗೋದಾಮಿನಲ್ಲಿ ಇರಿಸಿದ್ದ ವಿದ್ಯುತ್ ತಂತಿಯನ್ನು ಕಳವು ಮಾಡಿ, ಟೆಂಪೋದಲ್ಲಿ ಮಂಗಳೂರು ಕಡೆ ಬರುತ್ತಿದ್ದ ವೇಳೆ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಟೆಂಪೋ ಉರುಳಿ ಬಿದ್ದಿದೆ. ಗಾಯಗೊಂಡವರು ಸಮರ್ಪಕ ಉತ್ತರ ನೀಡದಿದ್ದಾಗ ಅನುಮಾನಗೊಂಡ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಕಳ್ಳತನ ಮಾಡಿದ್ದ ವಿದ್ಯುತ್ ತಂತಿಯ ಮೌಲ್ಯ ರೂ 3.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News