ದ್ವೇಷ ಪ್ರಚಾರಕರ ಖಂಡನೆ, ಸತ್ಯಶೋಧನೆಯನ್ನು ಮುಂದುವರಿಸುವೆ: ಮುಹಮ್ಮದ್ ಝುಬೈರ್

Update: 2022-07-23 15:55 GMT

ಹೊಸದಿಲ್ಲಿ,ಜು.23: ತನ್ನ ವಿರುದ್ಧದ ಎಲ್ಲ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡು ಎರಡು ದಿನಗಳ ಹಿಂದಷ್ಟೇ ಇಲ್ಲಿಯ ತಿಹಾರ ಜೈಲಿನಿಂದ ಬಿಡುಗಡೆಗೊಂಡಿರುವ ಪತ್ರಕರ್ತ ಹಾಗೂ ಆಲ್ಟ್ ನ್ಯೂಸ್ ನ ಸಹಸ್ಥಾಪಕ ಮುಹಮ್ಮದ್ ಝುಬೈರ್ ಅವರು, ದ್ವೇಷ ಪ್ರಚಾರಕರನ್ನು ಖಂಡಿಸುವುದನ್ನು ತಾನು ಮುಂದುವರಿಸುವುದಾಗಿ ಹೇಳಿದ್ದಾರೆ.

ಹೊಸ ಫೋನ್ ಮತ್ತು ಸಿಮ್ ಕಾರ್ಡ್ ಪಡೆದ ಬಳಿಕ ಟ್ವಿಟರ್ ಖಾತೆಯನ್ನು ಸ್ಥಾಪಿಸಿ ಟ್ವೀಟಿಸುವುದು ಮತ್ತು ಸುಳ್ಳುಸುದ್ದಿಗಳನ್ನು ಬಯಲಿಗೆಳೆಯುವುದು ತಾನು ಮಾಡಲಿರುವ ಮೊದಲ ಕೆಲಸವಾಗಿದೆ. ದ್ವೇಷ ಪ್ರಚಾರಕರ ಖಂಡನೆಯನ್ನೂ ಮುಂದುವರಿಸುತ್ತೇನೆ ಎಂದು ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಝುಬೈರ್ ತಿಳಿಸಿದರು.

ಪ್ರವಾದಿ ಮುಹಮ್ಮದ್‌ ರವರ ಕುರಿತು ಬಿಜೆಪಿ ನಾಯಕಿ ನೂಪುರ್ ಶರ್ಮಾರ ನಿಂದನಾತ್ಮಕ ಹೇಳಿಕೆಯ ಬಗ್ಗೆ ಟ್ವೀಟ್ ಪೋಸ್ಟ್ ಮಾಡಿದಾಗಲೇ ತಾನು ಬಂಧನವನ್ನು ನಿರೀಕ್ಷಿಸಿದ್ದೆ. ಅವರು ತನ್ನ ಹಿಂದೆ ಬೀಳಲಿದ್ದಾರೆ ಎನ್ನುವುದು ತನಗೆ ಖಚಿತವಾಗಿ ಗೊತ್ತಿತ್ತು. ಆದರೆ ಅವರು ಅಷ್ಟೊಂದು ಪ್ರತೀಕಾರದ ನಿಲುವನ್ನು ಹೊಂದಿರುತ್ತಾರೆ ಎನ್ನುವುದು ಗೊತ್ತಿರಲಿಲ್ಲ. ವ್ಯವಸ್ಥೆಯು ಅಷ್ಟೊಂದು ಕೆಟ್ಟಿರಲಿಕ್ಕಿಲ್ಲ ಎಂದು ತಾನು ಭಾವಿಸಿದ್ದೆ ಎಂದರು.

ತನ್ನ ಟ್ವೀಟ್ ಶರ್ಮಾರನ್ನು ಗುರಿಯಾಗಿಸಿಕೊಂಡಿರಲಿಲ್ಲ, ಆದರೆ ಮುಖ್ಯವಾಹಿನಿ ಮಾಧ್ಯಮಗಳು ಉತ್ತೇಜಿಸಿದ್ದ ದ್ವೇಷ ಭಾಷಣವನ್ನು ಖಂಡಿಸುವುದು ತನ್ನ ಉದ್ದೇಶವಾಗಿತ್ತು ಎಂದು ಹೇಳಿದ ಝುಬೈರ್, ಗೋದಿ ಮೀಡಿಯಾ ಉದ್ದೇಶಪೂರ್ವಕವಾಗಿ ಸುಳ್ಳುಸುದ್ದಿಗಳನ್ನು ಹರಡುತ್ತಿತ್ತು. ಇದು ಸ್ವಲ್ಪ ಚಿಂತೆಯ,ಸ್ವಲ್ಪ ತೊಂದರೆಯ ವಿಷಯವಾಗಿತ್ತು. ಅದನ್ನು ಬಯಲುಗೊಳಿಸಲು ತಾನು ಬಯಸಿದ್ದೆ ಎಂದರು.
ಸರಕಾರದ ಪರ ನಿಲುವು ಹೊಂದಿರುವ ಮಾಧ್ಯಮಗಳನ್ನು ಉಲ್ಲೇಖಿಸಲು ‘ಗೋದಿ ಮೀಡಿಯಾ’ಪದವನ್ನು ಬಳಸಲಾಗುತ್ತದೆ.

ಮೇ 27ರಂದು ಮಾಡಿದ್ದ ಟ್ವೀಟ್‌ನಲ್ಲಿ ಮೂವರು ಹಿಂದುತ್ವವಾದಿ ನಾಯಕರನ್ನು ಖಂಡಿಸಿದ್ದಕ್ಕಾಗಿ ತನ್ನ ವಿರುದ್ಧ ದಾಳಿಯನ್ನು ನಿರೀಕ್ಷಿಸಿದ್ದೆ. ತನ್ನನ್ನು ಕಾನೂನಿನ ಬಲೆಯಲ್ಲಿ ಸಿಕ್ಕಿಸಲು ಅವರು ದೃಢ ನಿರ್ಧಾರವನ್ನು ಮಾಡಿದ್ದರು,ಆದರೆ ಅವರಿಗೆ ತನ್ನ ವಿರುದ್ಧ ಏನೂ ಸಿಕ್ಕಿರಲಿಲ್ಲ. ಹೀಗಾಗಿ ಅವರು ನಾಲ್ಕು ವರ್ಷಗಳ ಹಿಂದಿನ ತನ್ನ ಟ್ವೀಟ್‌ನ್ನು ಕೆದಕಿ ತೆಗೆದಿದ್ದರು ಎಂದು ಝುಬೈರ್ ಹೇಳಿದರು.

‘2018ರಲ್ಲಿ ಮಾಡಿದ್ದ ಆ ಟ್ವೀಟ್‌ನಲ್ಲಿ ಧರ್ಮದ ಕುರಿತು ಏನೂ ಇರಲಿಲ್ಲ. ಅದು ರಾಜಕೀಯ ಪಕ್ಷವೊಂದರ ಕುರಿತಾಗಿತ್ತು. ಅವರು ಅದನ್ನು ನಾನು ಹಿಂದು ದೇವತೆಗಳನ್ನು ನಿಂದಿಸಿದ್ದೇನೆ ಎಂದು ಕಾಣಿಸುವ ಹಾಗೆ ತಿರುಚಿದ್ದರು ’ಎಂದರು.

ತನ್ನ ಬಂಧನದ ಬಳಿಕ ದಿಲ್ಲಿ ಪೊಲೀಸರು ಆಲ್ಟ್ ನ್ಯೂಸ್  ಸ್ವೀಕರಿಸಿದ್ದ ದೇಣಿಗೆಗಳ ಕುರಿತು ತನ್ನನ್ನು ಪ್ರಶ್ನಿಸಿದ್ದರು,2018ರ ಟ್ವೀಟ್‌ನ ಕುರಿತು ಅಲ್ಲ ಎಂದ ಝುಬೈರ್,ಅವರು ಟ್ವೀಟ್ ಕುರಿತು ಎಫ್ಐಆರ್ ದಾಖಲಿಸಿದ್ದಿರಬಹುದು,ಆದರೆ ಅವರು ತನಗೆ ಎಲ್ಲ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದರು. ತನ್ನನ್ನು ಸಿಲುಕಿಸಲು ಅವರು ಗಟ್ಟಿ ನಿರ್ಧಾರವನ್ನು ಮಾಡಿದ್ದಾರೆ ಎನ್ನುವುದು ತನಗೆ ಸ್ಪಷ್ಟವಾಗಿತ್ತು ಎಂದರು.

ತನ್ನ ಗುರುತು ಮತ್ತು ತನ್ನ ಧರ್ಮದಿಂದಾಗಿ ತಾನು ಪೊಲೀಸರ ಗುರಿಯಾಗಿದ್ದೆ ಎಂದ ಝುಬೈರ್,ನಾನೂ ತುಂಬ ಧ್ವನಿಯೆತ್ತುತ್ತೇನೆ ಮತ್ತು ಅದು ಅವರಿಗೆ ಹಿಡಿಸುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News